(01) ರಾಮಧಾನ್ಯ ಚರಿತೆ,
ಮೂರ್ತಿ ದೇರಾಜೆ ನಿರ್ದೇಶನದಲ್ಲಿ
ಸೊಗಸಾದ ಹಿನ್ನೆಲೆ ಸಂಗೀತ (ಭಾರವಿ ದೇರಾಜೆ) ಮನಸೆಳೆಯುವ ಬೆಳಕಿನ ವಿನ್ಯಾಸ (ಜ್ಯೂನಿಯರ್ ಶಂಕರ್),
" ಪ್ರೊಫೆಶ್ಶನಲ್" ಎನ್ನುವ ರೀತಿಯ ದೃಶ್ಯ ವೈಭವ- ಅಭಿನಯಗಳಿಂದಾಗಿ ಅದ್ಭುತ ಯಶಸ್ಸು ಈ ನಾಟಕಕ್ಕಿದೆ.
ಶ್ರೀಯುತರಾದ ಕೆರೆಮನೆ ಮಹಾಬಲ ಹೆಗ್ಡೆ, ಗಂಗಾಧರ ಭಟ್ ಅಳಿಕೆ, ಅಂಬಾತನಯ ಮುದ್ರಾಡಿ,
ಎಮ್.ಎಲ್ ಸಾಮಗ, ಡಾ.ಶಾಂತಾರಾಮ್, ಪಾದೆಕಲ್ಲು ವಿಷ್ಣುಭಟ್, ಹೇರಂಜೆ ಕೃಷ್ಣಭಟ್, ಜೀವನ್ ರಾಮ್ ಸುಳ್ಯ
ಮುಂತಾದವರೆಲ್ಲ ನೋಡಿ ಮೆಚ್ಚಿಕೊಂಡಿದ್ದಾರೆ.
ಮುಂದಿನ ಜೂನ್ ತಿಂಗಳ ನಂತರ ಕರ್ಣಾಟಕದ ವಿವಿದೆಡೆಗಳಲ್ಲಿ ಪ್ರದರ್ಶನ ನಡೆಸುವ ಯೋಜನೆ ಇದೆ ಎಂದು
ಉಡುಪಿಯ ಕನಕದಾಸ ಅದ್ಯಯನ-ಸಂಶೋಧನಾ ಪೀಠದ ನಿರ್ದೇಶಕರು ತಿಳಿಸಿದ್ದಾರೆ.
(ವರದಿ - ’ರಾಮಚಂದ್ರ’)
(ಯಕ್ಷಪ್ರಭಾ - ಪತ್ರಿಕೆಯ 2009 ಎಪ್ರಿಲ್ ತಿಂಗಳ ಸಂಚಿಕೆ)
***********
"ರಾಮಧಾನ್ಯ ಚರಿತೆ ನಾಟಕ" ದ ಪೂರ್ವರಂಗ
-ಮೂರ್ತಿ ದೇರಾಜೆ ವಿಟ್ಲ
ಉಡುಪಿಯ ಕನಕದಾಸ ಅದ್ಯಯನ ಪೀಠದ ಹಿರಿಯರಾದ ಹೇರಂಜೆ ಕೃಷ್ಣ ಭಟ್ಟರು
2008 ಸೆಪ್ಟೆಂಬರ ಕೊನೆಯಲ್ಲಿ ಒಂದು ದಿನ ಫೋನ್ ಮಾಡಿ,
'ಓಯ್ !! ಮಕ್ಕಳ ನಾಟಕದವರೆ !! ಕನಕದಾಸರ -’ರಾಮಧಾನ್ಯ ಚರಿತೆ’ ನಾಟಕ ರೆಡಿ ಮಾಡ್ಲಿಕ್ಕೆ ಆಗ್ತದೋ?
ನೋಡಿ...... ಸಾದ್ಯವಾದರೆ ಬೇರೆ ಬೇರೆ ಕಡೆ 8-10 ಪ್ರದರ್ಶನ ಕೂಡಾ ಮಾಡುವ, ಪ್ರಯತ್ನ ಮಾಡಿ’ ಅಂತ ಹೇಳಿದ್ರು.
ನನಗೆ ಖುಷಿಯೂ ಆಯ್ತು, ಹೆದರಿಕೆಯೂ ಆಯ್ತು.
ಪೌರಾಣಿಕ, ಐತಿಹಾಸಿಕ ನಾಟಕಗಳು ಮಕ್ಕಳಿಗೆ ನೋಡಲು-ಕೇಳಲು ಇಷ್ಟವಾಗಬಹುದಾದರೂ,
ಅವರೇ ಅಭಿನಯಿಸಲು ಹೊರಟಾಗ ನಟನೆ ಕೃತಕವಾಗಿಯೇ ಇರುವುದು ಕಂಡುಬರುತ್ತದೆ.
ಮಾತುಗಳನ್ನು ಮಕ್ಕಳು ಎಷ್ಟೇ ಚೆನ್ನಾಗಿ ಕಂಠಪಾಠ ಮಾಡಿ, ಗಟ್ಟಿ ಸ್ವರದಲ್ಲಿ ಒಪ್ಪಿಸಿದರೂ,
" ಮಾತು ".... "ಅನುಭವ" ಅಗದೇ ಇದ್ದಾಗ ಅದನ್ನು ನಾಟಕ ಎಂದು ಒಪ್ಪಿಕೊಳ್ಳುವುದು ಹೇಗೆ? ಎನ್ನುವ ಭಯ;
ಮಕ್ಕಳಿಗೆ ಅಂತಹ ಮಾತುಗಳನ್ನು ಅನುಭವವನ್ನಾಗಿ ಮಾಡಿಸುವಲ್ಲಿ.......
ನನಗೂ ಒಂದು ಕಲಿಕೆಯಾದೀತೋ ಏನೊ !! ಎನ್ನುವ ಆಸೆ. ದೈರ್ಯ ಮಾಡಿ ಒಪ್ಪಿಕೊಂಡೆ.
ಅಳಿಕೆಯ ಸತ್ಯ ಸಾಯಿ ವಿದ್ಯಾ ಕೇಂದ್ರದ ಹಿರಿಯರು ಮಕ್ಕಳನ್ನು ಒದಗಿಸಿ ಕೊಟ್ಟರು.
ಕೃಷ್ಣ ಭಟ್ಟರು ಯಾವ ಅವಸರವನ್ನೂ ಮಾಡದೇ, ಒತ್ತಡವನ್ನೂ ಹಾಕದೇ ಬೇಕಾದಷ್ಟು ಸಮಯವನ್ನು ಕೊಟ್ಟರು.
ಪರೀಕ್ಷೆ, ಮದ್ಯಂತರ ರಜೆ ಕಳೆದ ಬಳಿಕ,
ನವಂಬರ 2ನೇ ವಾರದಲ್ಲಿ ರಿಹರ್ಸಲ್ ಪ್ರಾರಂಭ. ದಿನದಲ್ಲಿ 80-90 ನಿಮಿಷಗಳಷ್ಟು.
ನಡು ನಡುವೆ - ಮಕ್ಕಳ ತಿಂಗಳ ಪರೀಕ್ಷೆ, ಅನಾರೋಗ್ಯ ಇತ್ಯಾದಿಗಳಿಂದ ಕುಂಟುತ್ತಾ ಸಾಗಿ,
ಜನವರಿಯ ಹೊತ್ತಿಗೆ ಪ್ರಯೋಗಿಸಬಹುದೆನ್ನುವ ದೈರ್ಯ ಬಂತು.
ಸುಮಾರು 50-60 ದಿನಗಳ ಕಾಲ ಒಟ್ಟೂ 100-120 ಗಂಟೆಗಳ ರಿಹರ್ಸಲ್ ನಡೆದಿರಬಹುದು.
ನಾಟಕದ ಪಾತ್ರಗಳನ್ನು ಸೀಮಿತ ಗೊಳಿಸಿಕೊಂಡು,
ಕತೆಯಲ್ಲಿ ಬರುವ ಕೊನೆಯ ದೃಶ್ಯದ ತ್ರಿಮೂರ್ತಿ-ದೇವತೆಗಳ ಬದಲು,
ಜನಸಾಮಾನ್ಯರಾದ ರೈತರ ಪಾತ್ರಗಳನ್ನು, ಮೂಲ ಕತೆಯಲ್ಲಿಲ್ಲದ ಭರತನ ಪಾತ್ರವನ್ನೂ ಸೇರಿಸಿಕೊಂಡು,
ಸಾದ್ಯವಾದಷ್ಟೂ ಮಕ್ಕಳ ಮಟ್ಟದ ದೃಶ್ಯಗಳನ್ನು ಸಂಯೋಜಿಸಿ, ಪ್ರತಿಯೊಬ್ಬನೂ ಎಲ್ಲಾ ಪಾತ್ರಗಳನ್ನು.....
ಒಬ್ಬೊಬ್ಬರಾಗಿ ಅಭಿನಯಿಸುತ್ತಾ....... ಯಾರಿಗೆ ಯಾವ ಪಾತ್ರ ಎಂದು ನಿರ್ಣಯವಾಯ್ತು.
ಮಕ್ಕಳ ಮೂಲಕವೇ ಸಂಭಾಷಣೆ ಸಿದ್ದವಾದ್ದರಿಂದ, ಬರಕೊಂಡು ಕಂಠಪಾಠ ಮಾಡುವ ಅಗತ್ಯ ಬೀಳಲಿಲ್ಲ.
ಶೈಲೀಕೃತ ಮಾತುಗಳಾದರೂ ಮಕ್ಕಳ ಅಭಿವ್ಯಕ್ತಿ ತೀರಾ ಸಹಜವಾಗಿಯೇ ಬರತೊಡಗಿತು ಎಂದೆನಿಸಿದಾಗ,
ನನ್ನ ಒತ್ತಡ ಕಡಿಮೆಯಾಯ್ತು. ಆದರೂ-
ಮಕ್ಕಳನಾಟಕದ ಹಣೆಪಟ್ಟಿಯಲ್ಲಿ ಹೀಗೆ ಆಡಿಸುವುದು ಸರಿಯಾದೀತೇ !! ಎನ್ನುವ ಯೋಚನೆಯಲ್ಲಿದ್ದಾಗ,
ರಂಗಭೂಮಿಯ ಅಪಾರ ಅನುಭವ ಇರುವ ಪ್ರಸಾದ್ ರಕ್ಷಿದಿ - ರಿಹರ್ಸಲ್ ನೋಡಿ,
’ಇದು ಮಕ್ಕಳ ನಾಟಕ ಅಲ್ಲ - ಆದರೆ ಮಕ್ಕಳಿಗೆ ನಾಟಕ ಸರೀ ಅರ್ಥ ಆಗಿದೆ’ ಎಂದಾಗ ದೈರ್ಯ ಬಂತು.
ಹಾಗೆ ಅಳಿಕೆಯಲ್ಲೇ ಮೊದಲ ಪ್ರದರ್ಶನ ನಿಶ್ಚಯವಾಯ್ತು.
ಒಂದು ಆಕಸ್ಮಿಕ ಅವಗಢದ ಬಗ್ಗೆ ಪತ್ರಿಕೆಯಲ್ಲಿ ಓದಿದಾಗ-
ನನಗೆ ದೈರ್ಯ ಸಾಲದೆ, ಹೇರಂಜೆಯವರೊಂದಿಗೆ ಮಾತಾಡಿ, ನಾಟಕ ಸಿದ್ದವಾದ ಬಗ್ಗೆ ತಿಳಿಸಲು ಸಾದ್ಯವೇ ಆಗಲಿಲ್ಲ.
ಅವರೇ ಫೊನ್ ಮಾಡಿ ವಿಚಾರಿಸಿ, ಕೂಡಲೇ ಉಡುಪಿಯ ರಾಜಾಂಗಣದಲ್ಲಿ ಪ್ರದರ್ಶನ ನಿಶ್ಚಯಿಸಿದರು.
ಆನಂತರ ಸುರತ್ಕಲ್ಲಿನಲ್ಲಿ. - ಹೀಗೆ ಮೂರು ಪ್ರದರ್ಶನ ಸಾದ್ಯವಾಯ್ತು.
ಎಲ್ಲಾ ಖರ್ಚು ವೆಚ್ಚಗಳನ್ನೂ ಉಡುಪಿಯ ಕನಕದಾಸ ಅದ್ಯಯನ ಪೀಠ ವ್ಯವಸ್ತೆ ಮಾಡಿತ್ತು.
ಮಕ್ಕಳಿಗೂ ಉಡುಗೊರೆಗಳನ್ನು ನೀಡಿ ಖುಶಿ ಪಡಿಸಿದ್ದರು.
ಈ ಸಂದರ್ಭ ಹೇರಂಜೆಯವರನ್ನು ನಾನು ಏನೆಂದು ಹೇಳಲಿ !!
ಅವರ ಸ್ತಿತಪ್ರಜ್ನತೆಗೆ ತಲೆಬಾಗುವುದು ಮಾತ್ರ ಸಾದ್ಯ.
ಈ ನಾಟಕದ ಸಂದರ್ಭ -
ಒಟ್ಟೂ ರಾಮಾಯಣದ ಪಾತ್ರಚಿತ್ರಣ ನೀಡಿದ್ದ,
ನನ್ನ ತೀರ್ಥರೂಪರಾದ ದೇರಾಜೆ ಸೀತಾರಾಮಯ್ಯನವರ ಮಾತುಗಳು, ನನಗೆ ಮಾರ್ಗ ದರ್ಶನ ನೀಡಿವೆ.
ಶ್ರೀ ಅಂಬಾತನಯ ಮುದ್ರಾಡಿಯವರು ಬರೆದ
ರಾಮಧಾನ್ಯಚರಿತೆ ನಾಟಕದ ಚೌಕಟ್ಟು, ಕೆಲವು ಸಂಭಾಷಣೆಗಳು, ನನಗೆ ಸಹಕಾರಿಯಾಗಿವೆ.
ಸಂಮಾನ್ಯ ಲಕ್ಷ್ಮೀಶ ತೋಳ್ಪಾಡಿಯವರು, ವಿಟ್ಲದ ಮೈತ್ರೇಯಿ ಗುರುಕುಲದಲ್ಲಿ,
ಭಗವದ್ಗೀತೆ, ಪಾತಂಜಲಯೋಗ ದಂತಹ ವಿಷಯಗಳನ್ನು
ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುವ ಕ್ರಮ,
ನನಗೆ ಈ ನಾಟಕದ ಮಾತುಗಳನ್ನೂ, ನನ್ನ ಅರಿವಿನ ಕಾವ್ಯ ಸೂಕ್ಷ್ಮಗಳನ್ನು
ಮಕ್ಕಳಿಗೆ ತಿಳಿಸಿ ಹೇಳಲು, ಸುಲಭ ಸಾದ್ಯವಾಗಿದೆ.
ಒಟ್ಟೂ ಈ ನಾಟಕ-
ನನಗೊಂದು ಕಲಿಕೆಯೂ, ಹೊಸ ಅನುಭವವೂ ಆದದ್ದು ಮಾತ್ರ ಮರೆಯಲಾರದ್ದು.
ಇಷ್ಟಕ್ಕೆಲ್ಲಾ ಕಾರಣವಾದ -
ಉಡುಪಿಯ ’ಕನಕದಾಸ ಸಂಶೋಧನಾ-ಅದ್ಯಯನ ಪೀಠದ ಸಮಸ್ಥರಿಗೂ ಗೌರವ ಪೂರ್ವಕ ನಮನ.
(ಮೂರ್ತಿ ದೇರಾಜೆ, ಅರಾಧನಾ, ವಿಟ್ಲ 574243. ಫೋನ್ - 9448239519
ನನ್ನ ಗೋಪಾಲ
ಅಳಿಕೆ-2010
ಅಳಿಕೆ-2010
ಒಂದು ಅಪೂರ್ವ ರಸಾನುಭವದ ನಾಟಕ ‘ನನ್ನ ಗೋಪಾಲ’
ನಾವು ಸಾಮಾನ್ಯವಾಗಿ ಹಿರಿಯರ ನಾಟಕ ನೋಡುವಾಗ ವಿಮರ್ಶಾ ದೃಷ್ಟಿಯಿಂದ ನೋಡುತ್ತೇವೆ,
ಮಕ್ಕಳ ನಾಟಕ ಆದ್ರೆ - ’ಮಕ್ಕಳು ಏನು ಮಾಡಿದರೂ ಚಂದ.....’ಎನ್ನುವ ರೀತಿಯಲ್ಲಿ
ಲೋಪ ದೋಷಗಳನ್ನು ಗಮನಿಸದೇ,ಏಕಾಗ್ರತೆಯೂ ಇಲ್ಲದೇ ನೋಡುತ್ತಾ,
’ಚೆನ್ನಾಗಿದೆ....’ ಎಂದು ಹೇಳಿಕೆ ಕೊಟ್ಟು ಬಿಡುತ್ತೇವೆ.
ಆದರೆ...... ’ಈ ಮಕ್ಕಳು ನಮಗೆ ನಿಮ್ಮ ಯಾವ ರಿಯಾಯಿತಿಯೂ ಬೇಡ......’ ಎನ್ನುವ ಹಾಗೆ,
ಒಂದು ಆಟದ ಹಾಗೆ ನಾಟಕ ಆಡಿದ್ದಾರೆ.......
ಇದು ಪುತ್ತೂರಿನ ತಹಶೀಲ್ದಾರರು, ಪುತ್ತೂರಿನ ಶಿವರಾಮ ಕಾರಂತರ ಬಾಲವನದಲ್ಲಿ,
ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮಕ್ಕಳ "ನನ್ನ ಗೋಪಾಲ" ನಾಟಕ ನೋಡಿ,
ತನ್ನ ಆನಂದವನ್ನು ಹತ್ತಿಕ್ಕಿಕೊಳ್ಳಲಾರದೇ ಹೇಳಿದ ಮಾತು.
ಈ ನಾಟಕ ನೋಡಿದವರಿಗೆ ಈ ಮಾತು ಅತಿಶಯೋಕ್ತಿ ಅನಿಸಲಾರದು.
ಶ್ರೀ ರಾಮಕೃಷ್ಣ ಪರಮಹಂಸರ ಕತೆಯನ್ನು ಆಧರಿಸಿ ಸುಮಾರು ಎಪ್ಪತ್ತೈದು ವರ್ಷಗಳಷ್ಟು ಹಿಂದೆ,
ರಾಷ್ಟ್ರಕವಿ ಕುವೆಂಪು ಆವರು ಬರೆದ ನಾಟಕ ’ನನ್ನ ಗೋಪಾಲ’.
ಆ ಕಾಲದಲ್ಲಿ ಆ ನಾಟಕವನ್ನು ಅಭಿನಯಿಸದವರಿಲ್ಲ ಎಂದು ಹಳೆಯ ಹಿರಿಯರು ಹೇಳುತ್ತಿರುತ್ತಾರೆ.
ಮಕ್ಕಳ ನಾಟಕವಾಗಿ ತುಂಬಾ ಪ್ರಸಿದ್ದಿ ಪಡೆದ ನಾಟಕ ಅದು.
ಆದರೆ ಕುವೆಂಪು ಅವರ ಪ್ರೌಢ ಶೈಲಿ, ಶಬ್ಧ,ವಾಕ್ಯಪ್ರಯೋಗಗಳು ಆಕಾಲಕ್ಕೆ ಸರಿ ಇದ್ದಿರಬಹುದಾದರೂ,
ಇಂದು ಅದೇ ಸಂಭಾಷಣೆಗಳನ್ನು ಮಕ್ಕಳಿಂದ ಹೇಳಿಸಿದರೆ ಕೃತಕವೆನಿಸೀತು.
ರೆಡಿಮೇಡ್ ಸ್ಕ್ರಿಫ್ಟ್ ಬಳಸುವುದು ’ಮಕ್ಕಳನಾಟಕ’ ಎನ್ನುವ ಕಲ್ಪನೆಗೇ ಹೊಂದಿಕೊಳ್ಳುವುದಿಲ್ಲ
ಎಂದು ಗಟ್ಟಿಯಾಗಿ ನಂಬಿರುವ ಮೂರ್ತಿದೇರಾಜೆ,
ಮೂಲ ನಾಟಕದ ಸಂಭಾಷಣೆಗಳನ್ನು ಕೈಬಿಟ್ಟು, ಮಕ್ಕಳ ಮೂಲಕವೇ ಹೊಸ ನಾಟಕವನ್ನು ಕಟ್ಟಿದ್ದಾರೆ.
’ಮಕ್ಕಳದ್ದೇ ಮಾತು....’ ಎನ್ನುವುದು ಅತಿಶಯೋಕ್ತಿಯಾಗಬಹುದು.
ಸರಳವಾದ ಚಿಕ್ಕ ಚಿಕ್ಕ ವಾಕ್ಯಗಳ, ಎಲ್ಲಿಯೂ ಮಕ್ಕಳ ಮಟ್ಟಕ್ಕೆ ಮೀರದ ಮಾತುಗಳು.
ಆದರೆ ಚೆಲ್ಲಾಪಿಲ್ಲಿಯಾದ ಅಸಂಬದ್ದ ಬಾಲಿಶ ಮಾತುಗಳಲ್ಲ. ಸುಸಂಬದ್ದ ಪದಬಂಧದ ಅಚ್ಚುಕಟ್ಟಾದ ಮಾತುಗಳು.
ಮುಖಭಾವ, ದೇಹಭಾಷೆ, ರಂಗಚಲನೆ ಎಲ್ಲವೂ ತೀರಾ ಸಹಜವಾಗಿಯೇ ಇದ್ದುದರಿಂದ ,
ಮಾತುಗಳು ಪಟಪಟನೆ ಉದುರದೇ,ಉದ್ಘಾರ ಸಹಿತವಾಗಿ ಎಷ್ಟು ಬೇಕೋ ಅಷ್ಟು ತಡೆ ತಡೆದು ಬರುತ್ತಿದ್ದುದರಿಂದ,
ಮಕ್ಕಳು ಮಾತುಗಳನ್ನು ಅನುಭವಿಸಿ ಆಡಿದಂತೆ ಭಾಸವಾಗುತ್ತಿತ್ತು.
ಪ್ರೇಕ್ಷಕರಲ್ಲೊಬ್ಬರು ಉದ್ಘರಿಸಿದ್ದು ಹೀಗೆ -
’ಬಾರೀ ಒಳ್ಳೆದಾಗಿದೆ ! ಮಕ್ಕಳಿಗೆ ಹೇಳಿ ಕೊಟ್ಟದ್ದು ಅಂತ ಗೊತ್ತೇ ಆಗಲಿಲ್ಲ ಮಾರಾಯ್ರೆ ......’
ಹಳೆಯ ಸಾಂಪ್ರದಾಯಿಕ ನಾಟಕಗಳ ಭಾವಾತಿರೇಕಗಳಿಂದ ಬೇಸತ್ತು, ಹೊಸ ಅಲೆಯ ನಾಟಕಗಳ
’ಹೊಸತು’ ಅನ್ನುವ ಪದಕ್ಕೆ ಅಂಟಿಕೊಂಡು ಹಿರಿಯರ ಹಾಗೂ ಮಕ್ಕಳ ನಾಟಕಗಳನ್ನು ನೋಡುತ್ತಾ ಬಂದ ನಮಗೆ,
ಈ ರೀತಿಯ ’ರಸಾನುಭ’ ಆದದ್ದು ಅಪರೂಪ ಎನ್ನುವ ಯೋಚನೆ- ಈ ನಾಟಕ ನೋಡಿದ ಮೇಲೆ ಕಂಡಿತ್ತು.
ಮಕ್ಕಳು ’ಕೋರಸ್’ ಆಗಿ ಜೊತೆಯಾಗಿಯೇ ಮಾತಾಡುತ್ತಾ, ಅರಳು ಹುರಿದಂತೆ ಮಾತು ಒಪ್ಪಿಸುವುದನ್ನೇ
ಮಕ್ಕಳ ನಾಟಕ ಅಂತ ತಪ್ಪಾಗಿ ತಿಳಿದಿದ್ದೇವಲ್ಲಾ !! ಎಂದೂ ಅನಿಸಿತ್ತು.
’ದೇವರು ಒಲಿಯುವುದು ಮುಗ್ಧತೆಗೆ ಮಾತ್ರ, ತಿಳುವಳಿಕೆಗೆ ಅಲ್ಲ’ ಎನ್ನುವ, ಪರಮಹಂಸರ ತತ್ವವನ್ನು
ಕುವೆಂಪು ಅವರು ತನ್ನ ಈ ನಾಟಕದ ಒಂದು ಹಾಡಿನಲ್ಲಿ ತಿಳಿಸಿದ್ದಾರೆ.
ಆ ಹಾಡನ್ನು ಗರ್ತಿಕೆರೆ ರಾಘಣ್ಣನವರ ರಾಗ ಸಂಯೋಜನೆಯೊಂದಿಗೆ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ.
ಉಳಿದಂತೆ, ಬೇರೆಯೇ ಕೆಲವು ದೃಷ್ಯಗಳೂ ಸೇರಿ ಒಂದು ಹೊಸ "ನನ್ನ ಗೋಪಾಲ" ಆಗಿದೆ.
ಒಂದು ಹಾಡು ಮತ್ತು ನೃತ್ಯದ ಮೊಲಕ ಸೃಷ್ಟಿಸಿದ ನಂದಗೋಕುಲ ಪ್ರೇಕ್ಷಕರಿಗೆ ಗುಂಗು ಹಿಡಿಸಿದೆ.
ಕೊನೆಯ ಒಂದು ದೃಷ್ಯ, "ಮ್ಯಾಜಿಕ್" ಇರಬಹುದೇನೋ !! ಎನ್ನುವ ಸಂದೇಹ ಬರುವಂತೆ ಇದೆ.
ಇಡೀ ನಾಟಕದಲ್ಲಿ ಒಂದು ಕಪ್ಪು ಬಣ್ಣದ ಪೆಟ್ಟಿಗೆ ಬಿಟ್ಟರೆ ಬೇರೆ ಸೆಟ್ಟಿಂಗ್ ಇಲ್ಲ.
ಲೈಟಿಂಗ್ ಮೂಲಕವೇ, ಕಪ್ಪು ಪರದೆಯೇ ತುಂಬು ಮರಗಳ ಕಾಡಾಗಿ ಕಂಡದ್ದು ಒಂದು "ಥ್ರಿಲ್"
.
ಇಪ್ಪತ್ತೈದು ವರ್ಷಗಳಿಂದ ಮಕ್ಕಳ ನಾಟಕಗಳನ್ನೇ ಆಡಿಸುತ್ತಾ ಬಂದ
ಮೊರ್ತಿ ದೇರಾಜೆ ಯವರ ವಿನ್ಯಾಸ - ನಿರ್ದೇಶನದ ಈ ನಾಟಕದಲ್ಲಿ
ಪ್ರಸನ್ನ ಚೊಕ್ಕಾಡಿ (ಸಹ ನಿರ್ದೇಶನ ಮತ್ತು ನೃತ್ಯ ಸಂಯೋಜನೆ) ಜ್ಯೂನಿಯರ್ ಶ್ಂಕರ್ ತೇಜಸ್ವಿ (ಬೆಳಕು)
ಭಾರವಿ ದೇರಾಜೆ -ಪಾಣಿನಿ ದೇರಾಜೆ (ಸಂಗೀತ) ಚಿದಂಬರ್ ಕಾಕತ್ಕರ್ (ಕೊಳಲು)
ಸುಮತಿದೇರಾಜೆ, ಮೈಥಿಲಿ ಜ್ಯೂ.ಶಂಕರ್, ಯಶಸ್ವಿನಿ ದೇರಾಜೆ, (ಹಿನ್ನೆಲೆ ಹಾಡು)
ಶಂಕರ್ ಪ್ರಸಾದ್,ಸುಧೀರ್ ಬಾಳೆಪುಣಿ,ಜಗನ್ನಾಥ, ಶ್ಯಾಮ್ ಕುಶಲ್,ಜಯರಾಮ್,ರಾಮಚಂದ್ರ ರಾವ್
ಮುಂತಾದವರ ಸಹಕಾರ.(ರಂಗ ನಿರ್ಮಾಣ,ಪ್ರಸಾದನ ಇತ್ಯಾದಿ) ಸುಮಾರು ನಲವತ್ತುಮಕ್ಕಳು (ರಂಗದ ಮೇಲೆ)
ಸುಂದರವಾದ ಸಂಗೀತ, ಪರಿಣಾಮಕಾರಿಯಾದ ಬೆಳಕು, ಸರಳವಾದ ಮೇಕಪ್ -ವಸ್ತ್ರ ವಿನ್ಯಾಸ,
ಮೈಕ್ ದ್ವನಿ ಅಲ್ಲವೇನೋ !! ಎಂದು ಭಾವಿಸುವಷ್ಟು ಮೃದುವಾಗಿಯೂ,ಸ್ಪಷ್ಟವಾಗಿಯೂ ಇದ್ದ ದ್ವನಿವರ್ಧಕ
ಇವೆಲ್ಲವೂ ಮಕ್ಕಳ ಅಭಿನಯದೊಂದಿಗೆ ಒಂದಾಗಿ ಸೇರಿಕೊಂಡು,
ಸೃಷ್ಟಿಯಾದ ಒಂದು ಸುಂದರ ಕಲಾಕೃತಿ "ನನ್ನ ಗೋಪಾಲ".
ಇದನ್ನು ಪುತ್ತೂರಿನಲ್ಲಿ ಪ್ರಾಯೋಜಿಸಿದ, ಪುತ್ತೂರಿನ ’ರಂಗಾಂತರಂಗ’ ಸಂಸ್ಥೆಗೆ ಅಭಿನಂದನೆಗಳು.
.........‘ಸುಶ್ರುತ ’
("ಈ ಮಾಸ ನಾಟಕ")
ನನ್ನ ಗೋಪಾಲ ಎಂಬ ಮಕ್ಕಳ ನಾಟಕವನ್ನು ನೋಡಿ..................
--------ರಾಧೇಶ ತೋಳ್ಪಾಡಿ. ಎಸ್
ಒಂದು ಉತ್ತಮ ಕಲಾಕೃತಿಯು -
ಅದು ನಾಟಕ, ಚಿತ್ರ, ಶಿಲ್ಪ, ಸಂಗೀತ, ಕತೆ, ಕವಿತೆ ಇತ್ಯಾದಿ ಯಾವುದೇ ಪ್ರಕಾರದ್ದಾಗಿರಲಿ,-
ಪ್ರೇಕ್ಷಕನಲ್ಲಿ ಮೂಡಿಸುವುದು ಕಾವ್ಯಾನುಭವವನ್ನೇ ಎಂಬುದು ಮತ್ತೊಮ್ಮೆ ಸಾಬೀತಾದದ್ದು -
ಇತ್ತೀಚೆಗೆ ಅಳಿಕೆಯಲ್ಲಿ ನಡೆದ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶಿಸಲ್ಪಟ್ಟ
ನನ್ನ ಗೋಪಾಲ ಎಂಬ ಮಕ್ಕಳ ನಾಟಕ ವನ್ನುನೋಡಿದಾಗ.
ಪ್ರಕಾರದ ಬಾಹ್ಯ ಸ್ವರೂಪಗಳೆಲ್ಲ ಕರಗಿ ಹೋಗಿ,
ಸಹೃದಯನಲ್ಲಿ ‘ಕೇವಲ ಆನಂದಾನುಭೂತಿ ಮಾತ್ರ’ ಎಂದಾದಾಗ,
"ಅನುಭವಿಸಲ್ಪಟ್ಟದ್ದು ಅಪ್ಪಟ ಕಲೆ" ಎಂಬುದಕ್ಕೆ ಸಾಕ್ಷಿಯಾಗುತ್ತದೆ.
ಸಹೃದಯನಲ್ಲಿ ‘ಕೇವಲ ಆನಂದಾನುಭೂತಿ ಮಾತ್ರ’ ಎಂದಾದಾಗ,
"ಅನುಭವಿಸಲ್ಪಟ್ಟದ್ದು ಅಪ್ಪಟ ಕಲೆ" ಎಂಬುದಕ್ಕೆ ಸಾಕ್ಷಿಯಾಗುತ್ತದೆ.
ಶ್ರೀ ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕತೆಯೊಂದು,
ಕನ್ನಡದ ರಸಋಷಿ ಕುವೆಂಪು ಅವರ ಕಲ್ಪನೆಯ ಮೂಸೆಯಲ್ಲಿ
‘ನನ್ನ ಗೋಪಾಲ’ ಎಂಬ ಮಕ್ಕಳ ನಾಟಕವಾಗಿ ರೂಪುಗೊಂಡು ಪ್ರಸಿದ್ದಿ ಪಡೆದದ್ದು ಎಲ್ಲರಿಗೂ ತಿಳಿದ ವಿಚಾರವಾದರೂ,
ಅಳಿಕೆಯ ಮಕ್ಕಳ ಈ ನಾಟಕ - ಕುವೆಂಪು ಅವರ ಅದೇ ನಾಟಕದ ಹಾಡೊಂದನ್ನು ಕೇಂದ್ರವಾಗಿಟ್ಟುಕೊಂಡು,
ರಿಹರ್ಸಲ್ ಮಾಡುತ್ತಾ ಮಾಡುತ್ತಾ ಮಕ್ಕಳ ಮೂಲಕವೇ ಅರಳಿಕೊಂಡ ಸಂಭಾಷಣೆಗಳು ಎಂಬುದು -
ಮಕ್ಕಳಲ್ಲಿ ಹುದುಗಿರುವ ಸೃಷ್ಟಿಶೀಲಪ್ರತಿಭೆಯನ್ನೂ ಹಾಗೂ
ಅದು ತಾನಾಗಿ ಬೆಳಗಿಕೊಳ್ಳಲು ಬಿಡುವ ನಿರ್ದೇಶಕನ ವಿನಯಶೀಲ ನಿಲುವನ್ನೂ ಒಟ್ಟಿಗೇ ಹೊಳೆಯಿಸಿಬಿಡುತ್ತದೆ.
ಆದುದರಿಂದಲೇ ನಾಟಕಕ್ಕೆ ಎಲ್ಲಿಲ್ಲದ ತಾಜಾತನವೂ ಸಹಜತೆಯೂ ಬಂದಿದೆಯೆನಿಸುತ್ತದೆ.
ಮಕ್ಕಳ ಅನುಭವಕ್ಕೆ ಹೊರತಾದ, ಭಾರವಾದ ಯಾವ ಭಾವವೂ ಎಲ್ಲೂ ತೋರದಿರುವುದಕ್ಕೂ
ಇದೇ ಕಾರಣವಿರಬಹುದು ಎಂದು ದೈರ್ಯವಾಗಿ ಹೇಳಬಹುದು .
ನಾಟಕದುದ್ದಕ್ಕೂ,ಗುರುಗಳನ್ನಾಗಲೀ,ಸಾಹುಕಾರನನ್ನಾಗಲೀ ಅನಗತ್ಯವಾಗಿ ವಿಡಂಬನಾತ್ಮಕವಾಗಿ ಬಿಂಬಿಸದೇ,
ಮಕ್ಕಳಿಗೆ ಆ ಪಾತ್ರಗಳು ಎಟುಕುವಷ್ಟನ್ನೇ ತೋರಿಸಿರುವುದು ನಿರ್ದೇಶಕ ತುಳಿದಿರುವ ಹೊಸ ಹಾದಿಯನ್ನು ತೋರಿಸುತ್ತದೆ.
ಇಲ್ಲವಾದರೆ ಗುರುವಿನ ಪಾತ್ರವು ಶಿಕ್ಷಣ ವ್ಯವಸ್ತೆಯನ್ನು ವಿಡಂಬಿಸುವುದಕ್ಕೆ ಮತ್ತು
ಸಾಹುಕಾರನು ಶೋಷಕನ ಅಪರಾಧಿ ಸ್ಥಾನದಲ್ಲಿ ನಿಲ್ಲುವುದಕ್ಕೆ ಬಳಕೆಯಾಗುವ ಅಪಾಯವಿತ್ತು.
ಕತೆಯ ಮುಖ್ಯ ಹರಿವಿನಿಂದ ದೂರ ಹೋಗುವ ಯಾವುದೇ ತಂತ್ರವನ್ನು ಬಳಸದ ಎಚ್ಚರವೇ,
ಕತೆಯ ಕೇಂದ್ರ ಅನುಭವವು ಸಹೃದಯರ ಮನಸ್ಸಿನಿಂದ ಮಾಸಿ ಹೋಗದೇ,
ಅಚ್ಚಳಿಯದೇ ಉಳಿಯುವಂತೆ ಮಾಡುವಲ್ಲಿ ನೆರವಾಗಿದೆ ಎಂದರೆ ತಪ್ಪಾಗಲಾರದು.
ಪರಮಹಂಸರ ಉದ್ದೇಶವೂ, ಕುವೆಂಪು ಅವರ ಆಶಯವೂ ಸಂಪೂರ್ಣವಾಗಿ ಬಿಂಬಿತವಾಗಿದೆ.
ಗೋವಿನ ಹಾಡಿನ ಕತೆಯಂತೆ, ಈ ನಾಟಕವೂ ತನ್ನ ನಿರಾಭರಣ ಸೌಂದರ್ಯದಿಂದಲೇ
ಎಲ್ಲರನ್ನೂ ಒಂದು ಅನಿರ್ವಚನೀಯ ಮಾರ್ದವತೆಯಲ್ಲಿ ತೋಯಿಸಿಬಿಡುತ್ತದೆ.
ಯಕ್ಷಗಾನ ತಾಳಮದ್ದಳೆಯಲ್ಲಿ ರಸಸಿದ್ದಿಯನ್ನು ಪಡೆದ ದೇರಾಜೆ ಸೀತಾರಾಮಯ್ಯನವರು
ತಮ್ಮ ಪಾತ್ರ ನಿರ್ವಹಣೆಯಲ್ಲಿ ತೋರಿಸಿದ್ದ ಅಪೂರ್ವ ಸಂಯಮ,
ಮೂರ್ತಿದೇರಾಜೆ ಮತ್ತು ಬಳಗದವರಲ್ಲೂ ಕಂಡುಬರುತ್ತಿರುವುದು ಆಕಸ್ಮಿಕವೇನಲ್ಲ.
ನಾಟಕದ ಉದ್ದಕ್ಕೂ ಕಾಯ್ದುಕೊಳ್ಳುವ ಹದವು, ಸಾಮಾನ್ಯವಾಗಿ ಹೆಚ್ಚಿನ ರಂಗಪ್ರಸ್ತುತಿಗಳಲ್ಲಿ ಕಾಣಸಿಗುವುದಿಲ್ಲ
ಎಂಬುದೇ ಈ ನಾಟಕದ ಅನನ್ಯತೆಗೆ ಕಾರಣವಾಗಿದೆ.
ಕತೆಯ ಒಡಲಿನಿಂದಲೇ ಮೂಡಿಕೊಳ್ಳುವ ಸಂಗೀತದ ರಾಗಗಳು, ಕತೆಯಿಂದ ಹೊರಗೆ ನಿಲ್ಲದೇ,
ಅದರೊಂದಿಗೆ ಹೆಣೆದುಕೊಂಡು ಹೋಗುವ ಬಗೆಯನ್ನು ಸವಿದೇ ತಿಳಿಯಬೇಕು.
ರಂಗ ಸಜ್ಜಿಕೆ, ವೇಷಭೂಷಣ, ಬೆಳಕಿನ ವಿನ್ಯಾಸ ಎಲ್ಲದರಲ್ಲಿಯೂ
ಸರಳ ಹಾಗೂ ಸಹಜ ಸೌಂದರ್ಯವೇ ನಮ್ಮನ್ನು ಸೆಳೆಯುವುದು ಎಂಬುದನ್ನು ಗಮನಿಸುವಾಗ -
ಪದಗಳ ಹೆಚ್ಚಳದಿಂದ ಹೇಗೆ ಕವಿತೆಯ ಬಿಗುವು ದುರ್ಬಲಗೊಳ್ಳುವುದೋ,
ನಾಟಕದಲ್ಲಿಯೂ ಮೇಲಿನವುಗಳ ಉಮ್ಮಳಿಸುವಿಕೆಯು,
ನಿಜವಾದ ರಂಗಪರಿಣಾಮಕ್ಕೆ ಅಡ್ಡಿಯೇ..... ಎಂಬುದು ಅರಿವಾಗುತ್ತದೆ.
ಈ ಕಾರಣಕ್ಕೆ ಸಮಸಾಂಪ್ರತಿ ತಂಡದ ಭಾರವಿ ದೇರಾಜೆ (ಸಂಗೀತ),ತೇಜಸ್ವಿ ಜ್ಯೂನಿಯರ್ ಶಂಕರ್(ಬೆಳಕು),
ಪ್ರಸನ್ನ ಚೊಕ್ಕಾಡಿ,ಅಳಿಕೆ(ನೃತ್ಯ), ಸುಧೀರ್‌ಬಾಳೆಪುಣಿ,ಜಗನ್ನಾಥ ಅರಿಯಡ್ಕ, ಉದಯ ವಿಟ್ಲ,
ಜಯರಾಮ ಅಳಿಕೆ, ಶ್ಯಾಂ ಕುಶಲ್ ಅಳಿಕೆ, (ರಂಗ ಸಜ್ಜಿಕೆ,ಪ್ರಸಾದನ) ಇವರೆಲಾ ಅಭಿನಂದನಾರ್ಹರು.
ಅಳಿಕೆಯ ಮಕ್ಕಳು ಈ ನಾಟಕವನ್ನು ಅಭಿನಯಿಸಿದರು ಎನ್ನುವುದಕ್ಕಿಂತ
ಕತೆಯನ್ನು ರಂಗದ ಮೇಲೆ ಬಾಳಿದರು ಎಂಬುದೇ ಈ ನನ್ನ ಗೋಪಾಲದ ಹೆಚ್ಚುಗಾರಿಕೆ.
ಆದುದರಿಂದಲೇ ಅದು ನಮ್ಮದೇ ಕತೆಯಾಗಿ, ಯಾವಾಗಲೂ ಸಂಭಾವ್ಯವೆನ್ನಬಹುದಾದ ಅನುಭವವಾಗಿ,
ನೂರಾರು ಆದ್ಯಾತ್ಮಿಕ ಉಪನ್ಯಾಸಗಳು ಮಾಡಬಹುದಾದ್ದನ್ನು ಅಥವಾ ಮಾಡಲಾರದ್ದನ್ನು,
ಈ ಪುಟ್ಟ ನಾಟಕವು ಕಟ್ಟಿಕೊಡುವುದು ಅವಿಸ್ಮರಣೀಯ.
ನಾಟಕದ ಅಂತ್ಯದಲ್ಲಿ -
ನಿರಾಕಾರವು ಸಾಕಾರದ ಅಚ್ಚಿನೊಳಗೆ ಇಳಿದು ಬರಬಹುದಾದ ಬಗೆಗಿನ ಬೆರಗನ್ನು -ಮಕ್ಕಳೂ;
ತಮ್ಮ ತಮ್ಮ ನಿಲುವು ನಂಬಿಕೆಗಳಬಗೆಗೆ ಎದೆಮುಟ್ಟಿ ನೋಡಿಕೊಳ್ಳಬೇಕಾದ ಅನುಭವವನ್ನು -ಹಿರಿಯರೂ,
ಹೊತ್ತು ಮನೆಗೆ ಮರಳುವಂತಾಗುವುದು ಕಲೆಯ ಸಾರ್ಥಕ್ಯವನ್ನು ಸಾರುತ್ತದೆ.
ಇಷ್ಟು ಹೇಳಿಕೊಳ್ಳುವುದಕ್ಕೆ ಇಂಬು ಮಾಡಿಕೊಟ್ಟಿರುವ
ನಾಟಕಕ್ಕೆ, ಕಲಾವಿದರಿಗೆ, ನಿರ್ದೇಶಕರಿಗೆ,ಅವರ ಬಳಗಕ್ಕೆ, ಮತ್ತು ಸಂಘಟಕರಿಗೆ ವಂದನೆಗಳು.
(ಉದಯವಾಣಿ, ಈ ಮಾಸ ನಾಟಕ)
ರಾಧೇಶ ತೋಳ್ಪಾಡಿ. ಎಸ್.
ಬಂಟ್ವಾಳ,ದ.ಕ.
***************
ಕೂಲ್ ಕೂಲ್ ಮಳೆಗೆ - ಗರಂ ಗರಂ ಹಪ್ಪಳ ತಿಂದಂತೆ...... ‘ರಂಗಪ್ಪನ ಕತೆ’
ಮಳೆಯ ಸೊಬಗನ್ನು ಆಸ್ವಾದಿಸುತ್ತಾ, ಮನೆಯೊಳಗೆ ಬೆಚ್ಚಗೆ ಕುಳಿತಿರುವುದನ್ನು ಬಿಟ್ಟು,
ಆಗಸ್ಟ್ ತಿಂಗಳು ಬಂದರೂ ನಿಲ್ಲದ, ಜಡಿಮಳೆಯ ಅಬ್ಬರಕ್ಕೆ ಸಿಕ್ಕಿ, ಒದ್ದೆ ಮುದ್ದೆಯಾಗಿ ,
ಸ್ನೇಹಕ್ಕೆ ಕಟ್ಟುಬಿದ್ದು, ಈ ನಾಟಕ ನೋಡಲು ಬಂದವ, ನಾನೆಂತಹ ಹೆಡ್ಡ!!.........
ಎಂದು ಯೊಚಿಸುತ್ತಾ ಅಳಿಕೆ ಶಿಕ್ಷಣ ಸಂಸ್ಥೆಯ ರಂಗ ಮಂದಿರದೊಳಗೆ ಕುಳಿತಿದ್ದೆ.
ಸಾಮೂಹಿಕ ಪ್ರಾರ್ಥನೆ ಮುಗಿದಿತ್ತು, ಸಭ್ಹಾ ಕಾರ್ಯಕ್ರಮವೇನೂ ಇದ್ದಂತಿರಲಿಲ್ಲ.
ಸಂಜೆ ಸರೀ ಕತ್ತಲಾಗದೆ ನಾಟಕ ಇನ್ನೂ ಪ್ರಾರಂಭ ವಾಗದಿದ್ದರೂ,
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳೆ ತುಂಬಿದ್ದ ಸಭೆಯಲ್ಲಿ ಗದ್ದಲ-ಗುಜುಗುಜು ಏನೂ ಇದ್ದಂತಿರಲಿಲ್ಲ.
ನಾಟಕಕ್ಕೆ ಬೇಕಾದ ವಾತಾವರಣ ಸಹಜವಾಗಿಯೇ ಇದ್ದುದರಿಂದಲೋ ಏನೋ!
ನಾನೂ ಆ ’ಮೂಡ್’ನೊಳಗೆ ಸೇರಿ ಬಿಟ್ಟೆ.
ಸಂಗೀತದೊಂದಿಗೆ ಸೂತ್ರದಾರರ ಪ್ರವೇಶ.
’ಈ ನಾಟಕದವರ ಕೆಲವೊಂದು ಭ್ರಮೆಗಳಲ್ಲಿ ಇದೂ ಒಂದು, ಈ ಸೊತ್ರದಾರರು ಅನಿವಾರ್ಯವೇ ?’
ಎಂದು ಕೊಂಡವ...... ಕೊನೆಯಲ್ಲಿ ನನ್ನ ಅಭಿಪ್ರಾಯ ಬದಲಾಯಿಸಿ ಕೊಳ್ಳಬೇಕಾಯ್ತು.
ಸೂತ್ರದಾರರೇ, ನಾಟಕವನ್ನು ಆರಾಮವಾಗಿ ಮುಂದುವರಿಸುವಲ್ಲಿಮುಖ್ಯ ಪಾತ್ರ ವಹಿಸುತ್ತಾರೆ.
ಆಸೆಗಳೇನೂ ಇಲ್ಲದೇ, ತೃಪ್ತಿಯಿಂದಲೇ ಬದುಕುತ್ತಿದ್ದ ಕಡು ಬಡವ ಕಟ್ಟಿಗೆ ಮಾರುವವನೊಬ್ಬ,
ಅಕ್ಷಯ ಪಾತ್ರೆಯನ್ನು ಕಂಡು, ಆಸೆಯ ಕಿಡಿ ಹುಟ್ಟಿ, ಅಕ್ಷಯ ಪಾತ್ರೆಯನ್ನು ಪಡೆದು,ಶ್ರೀಮಂತನಾಗಿ,
ದುರಾಸೆ ಹೆಚ್ಚಾಗಿ,ಹೆಂಡಕ್ಕೂ ಬಲಿಯಾಗಿ ಕೊನೆಗೆ ಮಡಕೆಯನ್ನು ಒಡೆದುಕೊಳ್ಳುವ ಚಂದದ ಚಂದಮಾಮದ ಕತೆ.
ಇಲ್ಲಿ...ಇದು ರಂಗಪ್ಪನ ಕತೆ ಯಾಗಿದ್ದರೂ, ಇದು ನಮ್ಮ ಕತೆಯೂ ಹೌದು ಎನ್ನುವ ಸಂದೇಶ,ಸ್ಪಷ್ಟವಾಗಿದೆ.
ದೇವರು ನಮ್ಮಲ್ಲಿ ಆಸೆಯನ್ನು ಹುಟ್ಟಿಸಿ, ಮನುಷ್ಯ ಆಸೆಗೆ ಬಲಿಯಾಗ್ತಾನೋ ಅಂತ ನೋಡ್ತಾನಂತೆ
ಅನ್ನುವ ಮಾತು ಚೆನ್ನಾಗಿದೆ.ಆ ಮಾತು ಸ್ವಲ್ಪ ವಾಚ್ಯ ಅನಿಸಿದರೂ,
ಅದನ್ನು ಸೂತ್ರದಾರರು ತಮ್ಮಲ್ಲೇ ಮಾತಾಡಿಕೊಳ್ಳುವ ತಂತ್ರ ಮಕ್ಕಳ ನಾಟಕಕ್ಕೆ ಹೊಂದಿಕೊಳ್ಳುತ್ತದೆ.
ಆಳಿಕೆ ಶ್ರೀ ಸತ್ಯ ಸಾಯೀ ವಿದ್ಯಾ ಕೇಂದ್ರದ ಆಂಗ್ಲ ಮಾದ್ಯಮದ ಏಳನೇ ತರಗತಿಯ ಸುಮಾರು
ಐವತ್ತಕ್ಕೂ ಹೆಚ್ಚು ಮಕ್ಕಳು, ತಮ್ಮಸಹಜ ಅಭಿನಯದಿಂದ ಇವರು ಮಕ್ಕಳು ಎನ್ನುವುದನ್ನೇ ಮರೆಯಿಸಿ ಬಿಟ್ಟರು.
ಕರ್ನಾಟಕದ ಬೇರೆ ಬೇರೆ ಊರಿನ ಮಕ್ಕಳಾದ್ದರಿಂದ, ಬೇರೆ ಬೇರೆ ರೀತಿಯ ಕೆಲವು ವಿಶೇಷ ಪಾತ್ರ ಗಳು
ರಂಗದ ಮೇಲೆ ಸೃಷ್ಟಿಯಾಗಿದ್ದುವು. ನಿಜ ಜೀವನದಲ್ಲೂ ಕಂಡುಬರುವ ಇಂತಹ ಕೆಲವು ವಿಶಿಷ್ಟ ಕ್ಯಾರೆಕ್ಟರ್ ಗಳು,
ಅವರ ವಿಶಿಷ್ಟ ಹಾವ ಭಾವಗಳು ನೋಡುಗರಿಗೆ ಕಚಗುಳಿಯಿಟ್ಟವು. ಹಾಸ್ಯಗಳೆಲ್ಲಾ ಕ್ಲಿಕ್ ಆಗಿವೆ.
ನವಿರಾದ ಹಾಸ್ಯಲೇಪನದೊಂದಿಗೆ ಶ್ರೇಷ್ಠ ಮೌಲ್ಯವೊಂದನ್ನು ತಿಳಿ ಹೇಳುವ, ಈ ’ರಂಗಪ್ಪನ ಕತೆ’ಯನ್ನು
ವಿನ್ಯಾಸ ಗೊಳಿಸಿ,ಸಂಗೀತ ನೀಡಿ,ನಿರ್ದೇಶಿಸಿದವರು- ’ಸಮಸಾಂಪ್ರತಿ’ ಯ ಮೂರ್ತಿ ದೇರಾಜೆ.
ಒಂದಿಷ್ಟೂ ಹೆಚ್ಚೆನಿಸದ, ಮದುರವಾದ ಸಂಗೀತ, ಆಪ್ಯಾಯಮಾನವಾದ ಬೆಳಕಿನ ವಿನ್ಯಾಸ,
ಸ್ವಲ್ಪವೂ ಕೃತಕವೆನಿಸದ ಪ್ರಸಾದನ-ವೇಷಭೂಷಣ,ತೀರಾ ಸರಳವಾದ ರಂಗ ವೇಧಿಕೆ,ರಂಗ ಪರಿಕರಗಳು
ಇವೆಲ್ಲಾ ಎಂದಿನಂತೆ,’ಸಮಸಾಂಪ್ರತಿ’ತಂಡದ ವೈಶಿಷ್ಟ್ಯ.
ಸಮಸಾಂಪ್ರತಿಯ ಭಾರವಿ ದೇರಾಜೆ, ತೇಜಸ್ವಿ ಜ್ಯೂನಿಯರ್ ಶಂಕರ್, ಸುಧೀರ್ ಬಾಳೆಪುಣಿ,ಅಲ್ಲದೇ
ಅಳಿಕೆ ಸಂಸ್ಥೆಯ ಶ್ಯಾಂ ಕುಶಲ್, ಜಯರಾಂ, ಶಿಲ್ಪಿ ಸುರೇಶ, ಪ್ರಸನ್ನಚೊಕ್ಕಾಡಿ, ಭಾಸ್ಕರ್, ಮಹೇಶ್
ನಾರಾಯಣ ನಾಯಕ್, ಪ್ರಶಾಂತ್-
ಇವರೆಲ್ಲರ ಶ್ರಮವೂ ಸೇರಿದ ಒಂದು ಒಳ್ಳೆಯ ನಾಟಕ ’ರಂಗಪ್ಪನ ಕತೆ’,
ಕೂಲ್ ಕೂಲ್ ಮಳೆಯಲ್ಲಿ, ಗರಂ ಗರಂ ಹಪ್ಪಳದಂತೆ ನವಿರಾದ ಸುಖ
.
(ಉದಯವಾಣಿ, ಈ ಮಾಸ ನಾಟಕ)
-ಆರ್.ಸಿ.ಭಟ್
ಆರ್.ಸಿ.ಭಟ್
ಅಳಿಕೆ
ಬಂಟ್ವಾಳ,ದ.ಕ.
********************
ಪೂರ್ವರಂಗದ ಕೊನೆಗೆ.....
ಫುಣ್ಯಕೋಟಿ ಗೋವಿನ ಹಾಡು
ಪುತ್ತೂರು- 2012 ಎಪ್ರಿಲ್ 15
ನಾಟಕವೆಂಬ ಅಗತ್ಯ ಕಾರಣ
ಮಿಳಿತ ಎಂದರೆ ಏನು?.... ಮತ್ತು ಪ್ರಭಾವಪೂರ್ಣ ಹಾಗೂ ಪರಿಣಾಮಕಾರಿ ಮಿಳಿತದಿಂದ ಪರಿಣಾಮ ಸಿದ್ಧಿಸುವುದು ಹೇಗೆ?
ಆ ಫಲೋತ್ಪಾದಕತೆಯ ಹಿಂದಿರುವ ಪ್ರಕ್ರಿಯೆ ಯಾವುದು? ಎಂದು ಮುಂತಾಗಿ ತಲೆಕೆರೆದುಕೊಳ್ಳುವುದು
ನಿಮ್ಮ ಹವ್ಯಾಸವಾಗಿದ್ದರೆ ಸರಿ..... ಇರಲಿ. ಅದಕ್ಕೊಂದು ಆಂಗ್ಲ ಪದವಿದೆ ‘ಸಿನರ್ಜಿ’...... ಇದರೊಳಗೆ ಎನರ್ಜಿಯೂ ಇದೆ.
ಉಡುಪಿಯ ಪ್ರೊ. ಶಂಕರ್ ಹಾಗೂ ವಿಟ್ಲದ ಮೂರ್ತಿ ದೇರಾಜೆಯವರ ಕುಟುಂಬಗಳ ಮಿಳಿತವನ್ನು
ನೀವು ಸನಿಹದಿಂದ ಕಾಣುವಂತಾದರೆ ನಿಮಗಿದು ಅನುಭವಕ್ಕೆ ಬಂದೀತು. ಇವರೊಳಗಿನ ಮಿಳಿತ ಅಚ್ಚರಿ ತಂದೀತು.
ಗಂಡ, ಹೆಂಡತಿ, ಮಗ, ಸೊಸೆ ಎಲ್ಲರೂ ಗಿಲಿಗಿಲಿ ಮ್ಯಾಜಿಕ್ ಮಾಡ್ತಾರೆ,
ಅಥವಾ ಜಗದ ನಾಟಕದೊಳಗೆ ತಮ್ಮದೇ ಪಾತ್ರಗಳಾಗುತ್ತಾರೆ.
ಸಾಂಸ್ಕೃತಿಕ ಆಸಕ್ತಿಯನ್ನು ಉಸಿರಾಡಿದ ಲವಲವಿಕೆಗೆ ಮಾದರಿಯಾಗುತ್ತಾರೆ........
ಹೀಗನಿಸಿದ್ದು ಪುತ್ತೂರಿನ ಶಿಶು ಮಂದಿರದಲ್ಲಿ ಮಕ್ಕಳ ನಾಟಕ ಕಾರ್‍ಯಕ್ರಮ ನೋಡಿದಾಗ.
ಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಕಳೆದ ಹತ್ತು ವರ್ಷಗಳಿಂದ ಸಂಯೋಜಿಸುತ್ತಿರುವ
ಮಕ್ಕಳ ರಂಗನಾಟಕ ಕಾರ್‍ಯಾಗಾರವನ್ನು
ಮೂರ್ತಿ ದೇರಾಜೆ,ಶಂಕರಪ್ರಸಾದ್ ಮತ್ತು ಬಳಗದ ಸಮಸಾಂಪ್ರ್ರತಿ ತಂಡ ನಡೆಸಿಕೊಟ್ಟಿತು.
ದಶಮಾನೋತ್ಸವದ ಸಂದರ್ಭವೆಂದು ನಾಟಕಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಪೋಷಕ ಮಿತ್ರರ ಸಹಕಾರದೊಂದಿಗೆ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು.
ಹಲವು ಮಕ್ಕಳ ಹರ್ಷದ ಸೋನೆಯಲ್ಲಿ ಪೋಷಕರು ತೋಯ್ದು ಸಂಭ್ರಮಿಸಿದರು.
ಮೊದಲಿಗೆ ‘ಪೂರ್ವರಂಗ’ ಎಂಬ ಹೆಸರಿನಲ್ಲಿ,
ಕಾರ್‍ಯಾಗಾರದ ದೈನಂದಿನ ಚಟುವಟಿಕೆಯ ಆಯ್ದ ಕೆಲವು ಭಾಗಗಳನ್ನು ವೇದಿಕೆಯಲ್ಲಿ ನಿರ್ವಹಿಸಿದರು.
ಇದು ನಾಟಕವೇ ಎಂಬ ಪ್ರಶ್ನೆ ನೋಡುಗರಲ್ಲಿ ಮೂಡುವುದು ಸಹಜವಾದರೂ
ಹೀಗೂ ಮಾಡಬಹುದೆನ್ನುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮಕ್ಕಳೆಲ್ಲರೂ ವೇದಿಕೆಗೆ ಬರುವುದು, ನಿರ್ದೇಶಕರೂ ಬರುವುದು, ಏನು ಮಾಡೋಣ ಎಂಬ ಚರ್ಚೆ,
ಮಕ್ಕಳ ಪ್ರತಿದಿನದ ತುಂಟಾಟಗಳೇ ದೃಷ್ಯಗಳಾಗುತ್ತ.॒. ನೋಡುವ ಮಕ್ಕಳಲ್ಲಿ ನಾವೂ ಸೇರಬಹುದೆನ್ನುವ ಅಪೇಕ್ಷೆ ಹುಟ್ಟಿಸುತ್ತ॒.॒. ಹಾಗೇ ಪಕ್ಕನೆ ಮುಗಿದುಹೋದ ‘ಪೂರ್ವರಂಗ’ವು.....
'ಮಾಡುತ್ತಿದ್ದೇವೆ' ಎಂಬ ಅರಿವಿನೊಂದಿಗೆ ಮೂಡಿದ ಸಹಜನಾಟಕ ಎನ್ನಬಹುದೇನೋ.
ತದನಂತರ ನಡೆದ ಸಭಾಕಾರ್‍ಯಕ್ರಮವು ದೀರ್ಘವೆನ್ನಿಸಿದ್ದು ಮಾತ್ರವಲ್ಲದೆ,
ಇಷ್ಟೆಲ್ಲ ಬೇಕಾಗಿತ್ತೇ ಎಂಬ ಸ್ವರ ಸಭಾಸದರ ಮಧ್ಯದಿಂದ ಕೇಳಿಯೂ ಕೇಳಿಸದಂತೆ ಕೇಳಿಸಿತು.
ಸಂಭ್ರಮವೊಂದಕ್ಕೆ ಸಾಕ್ಷಿಗಳಾಗುವ ಹೊತ್ತಿಗೆ ಒಂದಿಷ್ಟು ಸೈರಣೆಯೂ ಬೇಕಲ್ಲ ಎಂಬ ಸಾಂತ್ವನದ ಮಾತೂ ಕೇಳಿಸುತ್ತಿತ್ತು.
ಸರಿಯಾದ ಸಮಯಕ್ಕೆ ಆರಂಭವಾಗಿ, ಎಲ್ಲರಿಗೂ ಸರಿಯಾಗುವ ರೀತಿಯಲ್ಲಿ ನಡೆದು,
ಸರಿಯಾದ ಸಮಯಕ್ಕೆ ಮುಕ್ತಾಯವಾಗಬೇಕೆಂಬ ಸರಿನಿರ್ಣಯಗಳಿಗೆ ಗಂಟುಬಿದ್ದು ಒದ್ದಾಡುವವರು
ಬಹುಷಃ ಇರಲಿಲ್ಲವೋ ಏನೋ.
ಅತಿಥಿಗಳಾಗಿ ಮಾತನಾಡಿದ ರಂಗತಜ್ಞ, ಕಲಾವಿದ ಶ್ರೀ ಮೋಹನ ಸೋನ ಅವರು
ಬಣ್ಣಗಳು ಮತ್ತು ಭಾವಗಳು ಎಂಬ ವಿಚಾರದಲ್ಲಿ ಸಂಶೋಧನಾತ್ಮಕವಾಗಿ ವಿವರಿಸಿದರು.
ಮಗುವಿನ ಆಸಕ್ತಿಯ ಬಣ್ಣಕ್ಕೆ ಕಾರಣವಾಗುವ ಮನೋವೈಜ್ಞಾನಿಕ ವಿಷಯಗಳತ್ತ ಬೆಳಕುಚೆಲ್ಲಿದರು.
‘ಮೂರ್ತಿ ದೇರಾಜೆಯವರು ಏನು ಮಾಡಿದ್ದಾರೆಂಬ ಬೌದ್ಧಿಕ ನೋಟವನ್ನು ಹೊರಗಿಟ್ಟಾಗ ಮಾತ್ರ
ಇಷ್ಟುವರ್ಷದಿಂದ ಏನೋ ಮಾಡುತ್ತಿದ್ದಾರೆ ಎಂಬುದು ಕಾಣಿಸುತ್ತದೆ’ ಎಂದ ಸೋನರು,
ನಾಟಕಗಳಲ್ಲಿ ನಿರ್ದೇಶಕನ ಚಮತ್ಕಾರಗಳೇ ಪ್ರಧಾನವಾದಾಗ ಕಲಾವಿದ ಕಾಣಿಸಲಾರ ಎಂದರು.
ಬಳಿಕ ‘ಗೋವಿನ ಹಾಡು’ ಎಂಬ ಕಿರುನಾಟಕ ನಡೆಯಿತು.
ದೇರಾಜೆ ಮತ್ತು ಶಂಕರ್ ಕುಟುಂಬದ ಮಿಳಿತವು ನಾಟಕದ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸಿತು.
ವೇದಿಕೆ ನಿರ್ವಹಣೆ, ಬೆಳಕನ್ನು ಬಳಸಿಕೊಳ್ಳುವ ತಂತ್ರ, ತಂಡ ಸ್ಫೂರ್ತಿ ಮುಂತಾದ ಸಂಗತಿಗಳ ಪರಿಚಯವಿಲ್ಲದೆಯೆ, ಸಹಜಭಾವದ ಪ್ರೇಕ್ಷಕರನ್ನು ನಾಟಕದೊಳಗೆ ತೇಲಿಸುವಲ್ಲಿ ಮಕ್ಕಳು ಸಫಲರಾದರು.
ತಲೆಗೆ ತಟ್ಟುವ ಅನ್ನುವುದರ ಬದಲಿಗೆ ಹೃದಯ ಮುಟ್ಟುವ ರೀತಿಯಲ್ಲಿ ನಾಟಕವಿತ್ತು.
ಗೊಲ್ಲನ ಪಾತ್ರಧಾರಿ ಸಹಜ ಅಭಿನಯದಿಂದ ಗಮನಸೆಳೆದರೆ, ಕರುವಿನ ಪಾತ್ರ ಎಳೆಯ ಚುರುಕುತನವನ್ನು ತೆರೆದಿಟ್ಟಿತು. ಗೊಲ್ಲನ ಕರೆಗೆ ಎಲ್ಲೋ ಒಳಗಿನ ಹಟ್ಟಿಯಿಂದ ದನಕರುಗಳು ಬರುವ ದೃಷ್ಯವಂತೂ ಕರತಾಡನಕ್ಕೆ ಪಾತ್ರವಾಯಿತು. ಅಬ್ಬರವಿಲ್ಲದ ಸಂಗೀತ, ಹೆಚ್ಚೆನಿಸದ ವೇಷಭೂಷಣ, ಮಿತವಾದ ರಂಗಪರಿಕರಗಳು ಗೋವಿನ ಹಾಡನ್ನು ಕೇಳಿಸಿ ತೋರಿಸಿದವು.
ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ಹುಲಿಯ ಶಿರವನ್ನು ಹೆಕ್ಕಿತಂದು ಪ್ರತಿಷ್ಠಾಪಿಸಿ, ಗೊಲ್ಲ ಹಾಗೂ ಗೋವುಗಳು ಕೈಮುಗಿಯುವಾಗ. ಬೌದ್ಧಿಕತೆಯ ಭಾರದೊಳಗೆ ಬಾಗುವುದನ್ನೂ ಮರೆಯುತ್ತಿದ್ದೇವೇನೋ ಅನಿಸಿತು.
ಇಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ
ಮೆದುಳಿನ ಎಡ ಹಾಗೂ ಬಲ ಭಾಗಗಳ ವಿಕಾಸ ಹಾಗೂ ಮಿಳಿತವು ಉತ್ತಮ ರೀತಿಯಲ್ಲಿ ನಡೆದು,
ಮನೋಬೌದ್ಧಿಕ ಅಭಿವೃದ್ಧಿಗೆ ಬೆಂಬಲ ದೊರೆಯುತ್ತದೆ.
ಕೇವಲ ಮಾರ್ಕ್ ಗಳಿಸುವುದಷ್ಟೆ ಸಾಧನೆಯ ಅರ್ಹತೆಯಲ್ಲ ಎನ್ನುವ ಮನೋವೈಜ್ಞಾನಿಕ ಅಂಶವನ್ನು ಗುರುತಿಸಿ,
ಮಕ್ಕಳನ್ನು ಕಳುಹಿಸಿಕೊಟ್ಟ (ಮನೆಯಲ್ಲಿ ತೊಂದರೆಯಾಗುತ್ತದೆ. ಅಲ್ಲಿಗಾದರೂ ಹೋಗಲಿ ಎಂದಲ್ಲ!!)
ಪೋಷಕ ಬಂಧುಗಳು ಅಭಿನಂದವಾರ್ಹರು.
ಹಿಮಾಲಯಕ್ಕೆ ಹೋಲಿಸದಿದ್ದರೆ ನಮ್ಮೂರಿನ ಪರ್ವತಗಳೂ ಚೆಂದ ಎನ್ನುವಂತೆ
ನಮ್ಮ ಮಕ್ಕಳು ನಮಗೇ ಇನ್ನಷ್ಟು ಹತ್ತಿರವಾದರು.
ನಾವು ಹಾಯಾಗುವುದು ಮುಖ್ಯವಾದಾಗ ಸಾಂಸ್ಕೃತಿಕ ಸಾಂಗತ್ಯ ಅಗತ್ಯಕಾರಣವಾಗುತ್ತದೆ.
ಇಂದಿನ ಸಮೃದ್ಧ ಬಾಲ್ಯವು ಮುಂದಿನ ಸಮಗ್ರ ಬದುಕಿಗೆ ಬುನಾದಿ ಎಂದು ಅರಿತವರಿಗೆ
ಒಂದಿಷ್ಟು ಅಧ್ಯಯನದ ಹಿನ್ನೆಲೆ ಖಂಡಿತ ಇರುತ್ತದೆ.
ಗಂಗಾಧರ ಬೆಳ್ಳಾರೆ, ‘ಅವನಿ’, ಸಾಲ್ಮರ, ಪುತ್ತೂರು. - ೫೭೪೨೦೩ ೯೪೪೮೯೧೧೮೮೫
**********
ಪೂರ್ವರಂಗದ ಕೊನೆಗೆ ........
ಪುಣ್ಯಕೋಟಿ ಗೋವಿನಹಾಡು
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ
ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ
ಆಟಕ್ಕೆ ಕತೆಯಿಲ್ಲ, ಕೊನೆಯಿಲ್ಲ ಮೊದಲಿಲ್ಲ
ನೋಟಕರು ಮಾಟಕರೆ - ಮಂಕುತಿಮ್ಮ
ಡಿ.ವಿ.ಜಿ.ಯವರ ಕಗ್ಗದ ಸಾಲುಗಳನ್ನು ಮತ್ತೆ ನೆನಪಿಗೆ ತಂದು ಕೊಂಡೆ.
ಎಲ್ಲರೂ ಪಾತ್ರಧಾರಿಗಳೇ ಆದ ಅಪೂರ್ವ ನಾಟಕ ಪ್ರಧರ್ಶನ ನಡೆದುದು ಪುತ್ತೂರು ವಿವೇಕಾನಂದ ಶಿಶು ಮಂದಿರದಲ್ಲಿ.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ ಕಳೆದ ಹತ್ತುವರುಷಗಳಿಂದ
ಮೂರ್ತಿ ದೇರಾಜೆಯವರ ’ಸಮಸಾಂಪ್ರತಿ’ ತಂಡದಿಂದ ರಂಗನಾಟಕ ತರಬೇತಿ ನಡೆಯುತ್ತಾ ಬಂದಿದೆ .
ಇದರ ದಶಮಾನೋತ್ಸವ ಸಂಭ್ರಮ ಎಪ್ರಿಲ್ ೧೫ ರಂದು ಸಂಪನ್ನ ಗೊಂಡಿತು.
ಅದರಲ್ಲಿ ಏನುಂಟು? ಎನ್ನವವರಿಗೆ ಏನೂ ಇಲ್ಲ. ಏನಿಲ್ಲ.....!! ಎಂದರೆ ಎಲ್ಲವೂ ಇದೆ.
ಇಲ್ಲಿ ಕೃತಕತೆಗೆ ಅವಕಾಶವಿಲ್ಲ.
ಮಕ್ಕಳ ಬಾಲ್ಯ ಹಾಗೆ ಇರಲಿ ಅವರಲ್ಲಿ ದೊಡ್ಡವರ ದೊಡ್ಡತನವನ್ನು ಬಲವಂತವಾಗಿ ತುರುಕುವುದು ಸರಿಯಲ್ಲ.
ಮಕ್ಕಳಾಟವು ಚೆಂದ ಮತ್ತೆ ಯೌವನವು ಚೆಂದ, ಮುಪ್ಪಿಲಿ ಚಂದ ನರೆಗಡ್ಡ ಎನ್ನುವಂತೆ,
ಮಕ್ಕಳನ್ನು ಮಕ್ಕಳಾಗಿ ಬಿಟ್ಟ ವಿಶೇಷ ನಾಟಕವಿದು. ಇದನ್ನು ವಿಶಿಷ್ಡ ಪದಗಳಿಂದ ವರ್ಣಿಸಲು ಬಾರದು.
ನೋಡಿದವರಿಗೆ ಕಣ್ಣ ಮುಂದೆ ನಮ್ಮ ಬಾಲ್ಯ, ಮಕ್ಕಳಾಟ, ಶಾಲೆ, ಮನೆ,ಆಟ,ಪಾಠಗಳಲ್ಲಿ
ದಿನನಿತ್ಯ ನಮ್ಮ ಬಾಯಿಂದ ಬರುವ ಸಹಜ ಮಾತುಗಳು.
ಇದನ್ನುರಂಗದ ಮೇಲೆ ಅಳವಡಿಸಿದ ಸಾಧನೆ ಮೆಚ್ಚಲೇ ಬೇಕು.
ಬಾಯಿತೆರೆದು ,ನಿರ್ಬೀತಿಯಿಂದ ಮಕ್ಕಳ ಹಾಡು ಮಾತಿಗೆ ತಲೆದೂಗಲೇ ಬೇಕು.
ಇದನ್ನು ಎಲ್ಲರೂ ತಮ್ಮ ಬಾಲ್ಯದ ದಿನಗಳಲ್ಲಿ ಅನು ಭವಿಸಿದವರೇ. ಇದರಲ್ಲಿ ಕಲ್ಪನೆಗೆ ಅವಕಾಶ ಇಲ್ಲ.
ರಂಗತರಬೇತಿ: ಎಂದಾಕ್ಷಣ ಮಕ್ಕಳು ದೊಡ್ಡ ಕಲಾವಿದರಾಗಿ ಅದ್ಬುತ ನಾಟಕ ಪ್ರಧರ್ಶನ ಮಾಡುತ್ತಾರೆಂಬ ನಿರೀಕ್ಷೆ ಬೇಡ.
ಇಲ್ಲಿ ಮಕ್ಕಳುಸಹಜವಾಗಿಯೇ ಎಲ್ಲ ಚಟುವಟಿಕೆಗಳನ್ನು ಮಾಡುತ್ತಾ ಹೋಗುತ್ತಾರೆ.
ಉರು ಹೊಡೆದ ಸಂಭಾಷಣೆ ಇಲ್ಲ. ಎಲ್ಲಿ ತಪ್ಪಿಹೋಗುವುದೋ ಎಂಬ ಆತಂಕವಿಲ್ಲ.
ಆಕಡೆ ಈಕಡೆ ನೋಡಿ ಅನುಕರಣೆ ಮಾಡುವುದಿಲ್ಲ.
ಆದರೆ ಅಲ್ಲೋಂದು ಅಂದವಿದೆ. ಒಂದು ಅರ್ಥವಿದೆ .
ರಂಗತರಬೇತಿ ನೀಡಬೇಕಾದರೆ ನಿರ್ದೇಶಕ ಎದುರಿಸುವ ಸವಾಲುಗಳು ನಮ್ಮ ಮುಂದೆ ಅನಾವರಣ ಗೊಳ್ಳುತ್ತದೆ.
ಅಲ್ಲಿ ನೋಡಿದ್ದೆಲ್ಲಕ್ಕೂ , ಕೇಳಿದ್ದೆಲ್ಲಕ್ಕೂ ನಾವು ನಿಜ ಮುದ್ರೆ ಒತ್ತಲೇ ಬೇಕು.
ತದನಂತರ ತರಬೇತಿ ಪಡೆದ ಮಕ್ಕಳಿಂದ ಪುಣ್ಯಕೋಟಿ ನಾಟಕ ಪ್ರದಶನ ನಡೆಯಿತು .
ಇದರ ರಂಗ ಸಜ್ಜಿಕೆ ತುಂಬಾ ಉತ್ತಮವಾಗಿತ್ತು.
ಗೊಲ್ಲನು ಹಸುಗಳನ್ನು ಕರೆದಾಗ ಅವುಗಳ ಪ್ರವೇಶದ ಸನ್ನಿವೇಶ ನಿಜಕ್ಕೂ ಗೋದೂಳಿ ಕಾಲವನ್ನೇಕಂಡಂತಾಯಿತು.
ಒಟ್ಟಿನಲ್ಲಿ ಮಕ್ಕಳ ಗಿಲಿಗಿಲಿಯೊಂದಿಗೆ ಮೂಡಿಬಂದ ಮನಮುಟ್ಟಿದ ಕಾರ್ಯಕ್ರಮ ಇದು.
ಹಲವು ದಶಕದಿಂದಲೂ ಶಾಲೆ ಶಾಲೆಗೆ ಹೋಗಿ ಸಕ್ಕರೆ ಗೊಂಬೆ, ಪೆಪ್ಪರಮಿಂಟು ಹಂಚುತ್ತಿದ್ದ ಹಿರಿಯ ಕವಿ, ಹಾಡುಗಾರ
ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ (ಸುಬ್ಬಜ್ಜ) ರನ್ನೂ ಇಂದಿನ ತಲೆ ಮಾರಿನ ಮಕ್ಕಳಿಗೂ ಪರಿಚಯಿಸಿ ಕೊಟ್ಟುದು ಅನನ್ಯ.
ಮೂರ್ತಿ ದೇರಾಜೆ ತಂಡದವರ ಈ ಕಲಾಸೇವೆಯು ಯಶೋಗಾನ ಮೊಳಗಿಸಲಿ.
- ಗಂಗಮ್ಮ ಮಣಿಲ
ಭಿನ್ನ ಶೈಲಿಯ ಮಕ್ಕಳ ನಾಟಕ ಪೂರ್ವರಂಗದ ಕೊನೆ ಮತ್ತು ಪುಣ್ಯಕೋಟಿ
"ಪೂರ್ವರಂಗದ ಕೊನೆ" ಒಂದು ಭಿನ್ನ ಚಿಂತನೆಯ ಮಕ್ಕಳ ನಾಟಕ.
ಮಕ್ಕಳ ನಾಟಕದ ಹಿನ್ನೆಲೆಯಲ್ಲಿ ಹೊಸದೊಂದು ಪ್ರಯೋಗವನ್ನು ಪ್ರಸ್ತುತ ಪಡಿಸುವ ನಾಟಕ.
ಮಕ್ಕಳ ನಾಟಕ ಹೇಗಿರಬೇಕು ಎಂಬುದರ ಕುರಿತಾದ ವಿಭಿನ್ನ ಪ್ರಯೋಗಗಳ ಮೂಲಕ
ಒಂದು ನಿರ್ಧಾರದತ್ತ ಹೊರಳುವ ಈ ನಾಟಕದ ಯೋಜನೆ
ಮಕ್ಕಳ ನಾಟಕ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ದುಡಿದಿರುವ
ಮೂರ್ತಿ ದೇರಾಜೆ ಮತ್ತು ಅವರ ಗೆಳೆಯರ ಸಮನ್ವಯ ಸಾಂಸ್ಕೃತಿಕ ಪ್ರತಿಷ್ಠಾನದ್ದು.
ಗುಂಡ್ಮಿಯ ಐರೋಡಿ ಸದಾನಂದ ಹೆಬ್ಬಾರ್ ಸ್ಮಾರಕ ರಂಗಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಕ್ಕಳ ನಾಟಕ ಯಾವುದೇ ಪೂರ್ವ ತಯಾರಿಯಿಲ್ಲದೆ
ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯ ಮೂಲಕ ಸಹಜವಾಗಿ ಅರಳಬೇಕು;
ಯಾವುದೇ ಸಿದ್ಧ ಸಂಭಾಷಣೆಗಳ ಕಂಠವಾಠವಿಲ್ಲದೆ ಸ್ಥಳದಲ್ಲೇ ಪಡೆಯುವ ಸ್ಫೂರ್ತಿಯಿಂದ
ಸೃಜನಶೀಲ ಮಾತುಗಳು ಬರಬೇಕು ಎಂಬುದು ಮೂರ್ತಿಯವರ ನಿಲುವು.
ಕಥಾವಸ್ತುವಿನ ಹಂದರದ ಪರಿಚಯವನ್ನಷ್ಟೇ ಮಕ್ಕಳಿಗೆ ಮಾಡಿದರೆ
ನಾಟಕದ ಕಥೆಯ ಎಳೆಗಳು ತಾವಾಗಿಯೇ ಹೆಣೆದುಕೊಳ್ಳುತ್ತವೆ, ಅದನ್ನೇ ಒಂದಿಷ್ಟು ಪರಿಷ್ಕರಿಸಿ ಮಾರ್ಗದರ್ಶನ ನೀಡಿದರೆ ಮಕ್ಕಳು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದಾದ, ಖುಷಿಯಿಂದ ಸವಿಯಬಲ್ಲ ನಾಟಕ ಸಿದ್ಧವಾಗುತ್ತದೆ
ಮತ್ತು ಮಕ್ಕಳ ನಾಟಕವು ಯಾವುದೇ ಸಂಕೀರ್ಣತೆ ಕ್ಲಿಷ್ಟತೆಗಳ ಭಾರವಿಲ್ಲದೆ,
ಸಂವಹನ ಜಟಿಲತೆಯನ್ನುಂಟುಮಾಡುವ ತಂತ್ರಗಳಾಗಲಿ, ಸಾಂಕೇತಿಕ ವಿವರಗಳಾಗಲಿ ಇಲ್ಲದೆ
ಸಾಮಾಜಿಕ ಸಮಸ್ಯೆ ಪರಿಹಾರ ಸೂಚನೆಗಳ ಪಾಠವಿಲ್ಲದೆ ಸರಳ-ಸುಂದರವಾಗಿರಬೇಕು ಎಂಬುದೇ ಅವರ ಉದ್ದೇಶ.
ಆದ್ದರಿಂದಲೇ ಅವರು ಒಟ್ಟು ಸೇರಿಸಿದ ಸುಮಾರು ೨೫ ಮಂದಿ ಮಕ್ಕಳ ತಂಡವು ವೇದಿಕೆಯ ಮೇಲೆ ಸಿದ್ಧಪಡಿಸಿದ ’ಪೂರ್ವರಂಗದ ಕೊನೆ’ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು.
ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ರೂಪಿಸಿದ ’ರಂಗ ನಾಟಕ ತಂಡ’ದ ಮಕ್ಕಳು
ಬಹಳ ಲವಲವಿಕೆಯಿಂದ ಈ ಸಿದ್ಧತಾ ನಾಟಕವನ್ನು ಅದರ ಕೊನೆಯಲ್ಲಿ ’ಪುಣ್ಯಕೋಟಿ’ಯನ್ನು ಅಭಿನಯಿಸಿ ತೋರಿಸಿದರು.
ಶಾಲೆಯ ’ರಂಗ ನಾಟಕ ತಂಡ’ಕ್ಕೆ ಇನ್ನೊಂದು ಊರಲ್ಲಿ ನಾಟಕ ಆಡಬೇಕೆಂಬ ಆಹ್ವಾನ ಬಂದಿರುತ್ತದೆ.
ಆದ್ದರಿಂದ ಬಹಳ ಸಹಜವಾಗಿ ಮುಖ್ಯೋಪಾಧ್ಯಾಯಿನಿಯವರು ಆ ತಂಡವನ್ನು ಕರೆದು
"ನಿಮಗಿವತ್ತು ಕ್ಲಾಸಿಲ್ಲ, ನಾಟಕಕ್ಕೆ ತಯಾರಿ ಮಾಡಿ. ಮಾರ್ಗದರ್ಶಕರು ಬರುತ್ತಾರೆ" ಅನ್ನುತ್ತಾರೆ.
ಪಾಠವಿಲ್ಲದ ಖುಷಿಯಿಂದ ಮಕ್ಕಳು ಕೇಕೆ ಹಾಕುತ್ತ ನಾಟಕ ಶಾಲೆಗೆ ಬರುತ್ತಾರೆ.
ಮಾರ್ಗದರ್ಶಕರು ಬಂದು "ಯಾವ ನಾಟಕ ಆಡುವುದೆಂದು ನೀವೇ ನಿರ್ಧರಿಸಿ. ನಾನು ನಡುವೆ ತಲೆ ಹಾಕುವುದಿಲ್ಲ"
ಎಂದು ಹೇಳಿ ನಿರ್ಗಮಿಸುತ್ತಾರೆ. ನಂತರ....
"ಯಾವ ನಾಟಕ"ವೆಂಬ ಕುರಿತು ಚರ್ಚೆ.... ಸೂಚನೆ, ಸಿಟ್ಟು, ಸೆಡವುಗಳ ಮೂಲಕ ಮುಂದುವರಿಯುತ್ತದೆ.
ಹಲವಾರು ಮಕ್ಕಳ ಕಥೆಗಳ ಉಲ್ಲೇಖ ಬರುತ್ತದೆ.
ಒಂದೆರಡು ಕಥೆಗಳಿಗೆ ರಿಹರ್ಸಲ್ ಆರಂಭವಾಗಿ, ಜಗಳವಾಗಿ ಅರ್ಧದಲ್ಲೇ ನಿಲ್ಲುತ್ತದೆ.
ಮೇಷ್ಟ್ರು ಬಂದು ಮಕ್ಕಳ ಹತ್ತಿರ "ಇವತ್ತಿಗೆ ಸಾಕು ಮನೆಗೆ ಹೋಗಿ.... ಪುಸ್ತಕ ಓದಿಯೋ ಅಥವಾ ನಿಮ್ಮ ಹಿರಿಯರ ಹತ್ತಿರ ಕೇಳಿಯೋ ಕಥೆ ಹುಡುಕಿಕೊಂಡು ಬನ್ನಿ" ಎಂದು ಹೇಳುತ್ತಾರೆ.
ಮಕ್ಕಳು ಆಡುತ್ತ-ಓಡುತ್ತ ಮನೆಗೆ ಹೋಗುವ ದೃಶ್ಯ.....
ಐಸ್ ಕ್ಯಾಂಡಿ ಮಾರುವವನ ಪ್ರವೇಶ. ಮಕ್ಕಳು ಅವನ ಮೇಲೆ ಬಿದ್ದು ಐಸ್ ಕ್ಯಾಂಡಿ ತಿನ್ನುತ್ತಾರೆ.
ಮುಂದೆ ಮನೆಗೆ ಹೋಗುತ್ತ ದಾರಿಯಲ್ಲಿ ಮಾವಿನ ಮರಕ್ಕೆ ಕಲ್ಲು ಎಸೆದು ಮಾವಿನ ಕಾಯಿ ಉದುರಿಸಿ ತಿನ್ನುತ್ತಾರೆ.
ಒಟ್ಟಿನಲ್ಲಿ ಇಲ್ಲಿ ಮಕ್ಕಳಿಗೆ ತಮ್ಮ ಬಾಲ್ಯದ ಆಟ ಪ್ರದರ್ಶಿಸಲು ಪೂರ್ತಿ ಸ್ವಾತಂತ್ರ್ಯ.
ಇಲ್ಲಿ ನಡೆಯುವ ಘಟನೆಗಳೆಲ್ಲವೂ ಒಂದು ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳ ದೈನಂದಿನ ಅನುಭವಗಳನ್ನು ಬಿಚ್ಚಿಡುತ್ತವೆ. ಬಹುಶಃ ಇಂದು ಹಳ್ಳಿಗಳೊಳಗಿನ ಬದುಕೂ ಪೂರ್ತಿ ಬದಲಾಗಿರುವುದರಿಂದ
ಇಂಥ ಅನುಭವಗಳಿಗೆ ಈಗ ವಾಸ್ತವದಲ್ಲಿ ಅವಕಾಶವಿದೆಯೋ ಇಲ್ಲವೋ ಗೊತ್ತಿಲ್ಲ.
ಅಂತೂ ನಾಟಕದಲ್ಲಿ ಅವುಗಳನ್ನು ದಾಖಲು ಮಾಡುವುದರ ಮೂಲಕ
ನಿರ್ದೇಶಕರು ಆ ಸೌಂದರ್ಯವನ್ನು ಪುನಃ ಕಟ್ಟಿಕೊಡಲು ಶ್ರಮಿಸುತ್ತಾರೆ.
’ಪೂರ್ವರಂಗದ ಕೊನೆ’ಯಲ್ಲಿ ಮಕ್ಕಳು ’ಪುಣ್ಯಕೋಟಿ’ ನಾಟಕವಾಡುವುದೆಂದು ನಿರ್ಧಾರಕ್ಕೆ ಬಂದು
ಪ್ರೇಕ್ಷಕರಿಗೆ ಹತ್ತು ನಿಮಿಷದ ವಿರಾಮ ನೀಡಿ ಸರಳವಾದ ವೇಷಭೂಷಣಗಳೊಂದಿಗೆ ಒಂದು ನಾಟಕ ಆರಂಭಿಸುತ್ತಾರೆ.
ಕಾಳಿಂಗ ಗೊಲ್ಲನನ್ನು ಬಿಟ್ಟರೆ ರಂಗವನ್ನು ತುಂಬುವ ಉಳಿದೆಲ್ಲ ಮಕ್ಕಳೂ ದನಕರುಗಳು.
ರಂಗದ ತುಂಬ ಆಡುತ್ತ ಓಡುತ್ತ ಹುಲ್ಲು ತಿನ್ನುತ್ತ ಕಲಗಚ್ಚು ಕುಡಿಯುತ್ತ ಕುಣಿಯುವ ದನಕರುಗಳ,
ನಾಟಕದ ವಾತಾವರಣವನ್ನು ನಿರ್ಮಿಸುತ್ತಾರೆ.
"ಪುಣ್ಯಕೋಟಿ"ಯಲ್ಲಿ ನಡೆಯುವ ಹಿಂಸೆ ಮಕ್ಕಳಿಗೆ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಚರ್ಚೆ,
ನಿರ್ದೇಶಕರನ್ನು ಸದಾ ಕಾಡಿರುವುದರಿಂದ ಆ ಹಿಂಸೆಯಲ್ಲಿ ಒಂದು ಧನಾತ್ಮಕ ಸಂದೇಶವನ್ನು ಹೊಸದಾಗಿ ಸೃಷ್ಟಿಸುತ್ತ ನಿರ್ದೇಶಕರು ಕೊನೆಯಲ್ಲಿ "ಸತ್ಯವಂತೆ ಪುಣ್ಯಕೋಟಿಯ ಕಥೆ"ಯಿದು ಎಂಬುದರ ಜತೆಗೆ "ಶ್ರೇಷ್ಠ ಹುಲಿಯ ಕಥೆಯಿದು"..... ಅಂತ ಸೇರಿಸುವ ಮೂಲಕ ಮಕ್ಕಳಿಗೆ ಹುಲಿಯ ಹಿರಿಮೆಯ ಕುರಿತಾದ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ನಾಟಕದ ಕುರಿತು ಹೊಸ ಚಿಂತನೆಗೆ ಹಚ್ಚು ಪ್ರಸ್ತುತಿ ಇದು.
ಡಾ| ಪಾರ್ವತಿ ಜಿ. ಐತಾಳ್
ಕುಂದಾಪುರ
(ಪ್ರಜಾವಾಣಿ,ಕರಾವಳಿ - ೨೧.೪.೨೦೧೩
.jpg)
.jpg)


.jpg)



