ಶಿಕ್ಷಣ ಎಂಬ ನಾಟಕವೂ....ನಾಟಕ ಎಂಬ ಶಿಕ್ಷಣವೂ.....
----- ಮೂರ್ತಿ ದೇರಾಜೆ, ವಿಟ್ಲ
ನಾನು ಚಿಕ್ಕವನಿದ್ದಾಗ, ನನಗೆ ಕಾಣುತ್ತಿದ್ದ ಒಂದು ಸಂಗತಿ ಏನೆಂದರೆ, -
ಈ ಶಾಲೆ ಎನ್ನುವುದು ಇಲ್ಲದಿರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು ........ ಅಂತ.
ಎಲ್ಲಾ ಮಕ್ಕಳೂ ಗುಟ್ಟಿನಲ್ಲಿ ಈ ವಿಷಯವನ್ನು ಹಂಚಿಕೊಂಡು ಖುಷಿ ಪಟ್ಟವರೇ..
ಇಂದಿಗೂ ಈ ಯೋಚನೆ ಬಹು ದೊಡ್ಡ ಅಪರಾಧ ಎನ್ನುವ ಪಾಪ ಪ್ರಜ್ನೆ ಏನೂ ನನ್ನನ್ನು ಕಾಡುತ್ತಾ ಇಲ್ಲ.
ಶಾಲಾ ಶಿಕ್ಷಣದ ಹೆಸರಿನಲ್ಲಿ ನಾವಿಂದು ಮಕ್ಕಳ ಉಲ್ಲಾಸ ,ಆನಂದಕ್ಕೆ ಅವಕಾಶ ನೀಡುತ್ತಿಲ್ಲವೇನೋ....!!
ಎನ್ನುವ ಸಂದೇಹ ನನ್ನದು. ನಾವು ಹಿರಿಯರು ಇಚ್ಚಿಸಿದಂತೆ ಮಕ್ಕಳು ಬೆಳೆಯಬೇಕೆಂದು ಅಪೇಕ್ಷಿಸುತ್ತಾ,
ಮಕ್ಕಳನ್ನು ಒಂದು ಯಂತ್ರದಂತೆ ಸಿದ್ದಗೊಳಿಸುತ್ತಿದ್ದೇವೋ ಏನೋ..
ನಗರದ ಹುಚ್ಚು ಇಂದು ಹಳ್ಳಿಗೂ ಕಾಲಿಟ್ಟಿದೆ. ಹಿರಿಯರ ಪ್ರತಿಷ್ಟೆಗೆ ಮಕ್ಕಳು ಬಲಿಯಾಗುತ್ತಿರುವಂತೆ ಕಂಡುಬರ್ತಾ ಇದೆ. ಮಕ್ಕಳ ಬೆಳವಣಿಗೆಗೆ, ಪ್ರತಿಭಾ ವಿಕಾಸಕ್ಕೆ ಸ್ಪರ್ಧೆ ತೀರಾ ಅಗತ್ಯ ಎನ್ನುವುದು ಒಂದು ಭ್ರಮೆ ಅನಿಸುವುದಿಲ್ಲವೇ...!!
ಆಟೋಟಗಳಲ್ಲಿ ಸ್ಪರ್ದೆ ಸರಿಯಾದದ್ದು, ವೈಜ್ನಾನಿಕ ನಿಖರತೆ ಇರುವುದರಿಂದ,
ಸೋತ ಮಗುವಿಗೆ ತನ್ನ ಅಸಾಮರ್ಥ್ಯದ ಅರಿವು ಆಗಿ ಬೆಳೆಯುವ ಛಲ ಮೂಡುತ್ತದೆ.
ಶಿಕ್ಷಣದಲ್ಲಿ, ಕಲೆಯಲ್ಲಿ ಸ್ಪರ್ಧೆ ಎನ್ನುವುದು ತೀರಾ ಅವೈಜ್ನಾನಿಕ, ನಿರ್ದಿಷ್ಟ ಮಾನದಂಡಗಳಿಲ್ಲ ಎನ್ನುವುದು ನನ್ನ ಭಾವನೆ
ತಮ್ಮ ಮಗುವಿಗೇ~ ಪ್ರಥಮ ಸ್ಥಾನ ಸಿಗಬೇಕಿತ್ತು ಎನ್ನುವುದು ಪ್ರತಿಯೊಬ್ಬ ಹೆತ್ತವರ, ಶಾಲೆಯವರ ಅನಿಸಿಕೆ.
ಸ್ಪರ್ಧೆಯಲ್ಲಿ ಗೆದ್ದ ಮಗುವಿಗೆ ’ತಾನು ಶ್ರೇಷ್ಠ’ ಎನ್ನುವ ಮೇಲರಿಮೆ;
ಸೋತ ಮಗುವಿಗೆ ’ತಾನು ಕನಿಷ್ಟ’ ಎನ್ನುವ ಕೀಳರಿಮೆ ಉಂಟಾಗುವ ಸಾದ್ಯತೆಯೇ ಹೆಚ್ಚಲ್ಲವೇ..!!
ನಮಗೆ ಗೊತ್ತಿಲ್ಲದೇ ನಾವೆಲ್ಲರೂ ಬಿಡುವಿಲ್ಲದ ಓಟದಲ್ಲಿದ್ದೇವೆಯೇ..!!
ದುಡ್ಡು, ಅಧಿಕಾರ, ಪ್ರತಿಷ್ಟೆಗಳೇ ಇಂದು ನಮ್ಮ ಮನದಾಳದ ಬಯಕೆಗಳೇ..!!
ಮಾನವತೆ, ವಿಕಸನ, ಸಮಾನತೆ, ವಿಶ್ವಬ್ರಾತೃತ್ವ, ಆರೋಗ್ಯಕರ ಸ್ಪರ್ಧೆ - ಇಂತಹ ಪದಗಳೆಲ್ಲ
ಯದ್ವಾ ತದ್ವ ಬಳಕೆಯಿಂದಾಗಿ ತಮ್ಮ ಅರ್ಥವನ್ನು ಕಳಕೊಂಡಿದೆ ಎಂದೆನಿಸುತ್ತಿಲ್ಲವೇ....!!
ನಮ್ಮ ಶಿಕ್ಷಣವನ್ನು ಸರಿಯಾಗಿ ಗಮನಿಸಿದವರಿಗೆ ಇದು ನಿತ್ಯ ಕಾಡುವ ಸಂಗತಿ.
"ಶಿಕ್ಷಣ ಎಂದರೆ - ಮಗುವಿನ ತಲೆಯೊಳಗೆ ಎಷ್ಟು ಸಾದ್ಯವೋ ಅಷ್ಟು ತುಂಬಿಸುವುದು" ಎನ್ನುವ ಯೋಚನೆ ಸರಿಯೇ..?
ಬದಲಿಗೆ "ಮಗುವಿನಲ್ಲಿರುವ ಸಾಮರ್ಥ್ಯವನ್ನು ಹೊರಗೆಳೆಯುವಂತಾದ್ದು, ಮಗುವಿನ ಸಾಮರ್ಥ್ಯವನ್ನು ಬೆಳೆಸುವಂತಾದ್ದು", ಎನ್ನುವ ಭಾವನೆ ಹಿರಿಯರಲ್ಲಿ ಮೂಡಿದರೆ ಒಳಿತಲ್ಲವೇ...
ಮನಶಾಸ್ತ್ರಜ್ನರ ಪ್ರಕಾರ ಕಲಿಕೆ ಎನ್ನುವುದು ಬಾಲ್ಯದ ಮೊದಲ ವರ್ಷಗಳಲ್ಲೇ ಮುಗಿದಿರುತ್ತದಂತೆ,
ನಂತರ ಏನಿದ್ದರೂ ಅದರ ವಿಸ್ತರಣೆ ಅಷ್ಟೆ.
ತಮ್ಮ ಸುತ್ತಮುತ್ತಲಿನ ಪ್ರಕೃತಿ, ಪರಿಸರ, ಪ್ರಾಣಿ -ಪಕ್ಷಿಗಳು, ಹಿರಿಯರು, ಓರಗೆಯವರು
ಎಲ್ಲವನ್ನೂ ನೋಡುತ್ತಾ, ಕೇಳುತ್ತಾ, ಗಮನಿಸುತ್ತಾ ಮಕ್ಕಳು ಕಲಿಯುತ್ತಾರೆ.
ಆ ಕಲಿಯುವುದು ಕುರಿತಾಗಿ ಅಲ್ಲ, ಅರಿವಿಲ್ಲದೇ ನಡೆಯುವುದು.
ಹಸಿವು ನಿದ್ರೆಗಳಂತೆ, ಆಟ ನಾಟಕಗಳೂ ಮನುಷ್ಯನ ಮೂಲಭೂತ ಪ್ರವೃತ್ತಿ. ಮನುಷ್ಯನ ಹುಟ್ಟಿನೊಂದಿಗೇ ಇದೆ.
ಮಗುವಿಗೆ ಆಟ ಬೇಕು. ಅದು ಕಂಡದ್ದು, ಕೇಳಿದ್ದು, ಮುಟ್ಟಿದ್ದು, ಮೂಸಿದ್ದು, ಸವಿದದ್ದು ಎಲ್ಲಾ
ಮತ್ತೊಮ್ಮೆ ಪ್ರಕಟವಾಗಲೇ ಬೇಕು. ಮಗುವಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವೆ ಬಹಳ ಅಂತರವೇನೂ ಇರುವುದಿಲ್ಲ.
ಅದೂ ಅದಕ್ಕೆ ಆಟ. ಮಗುವಿಗೆ ಅದರ ಆಟಕ್ಕೆ, ಒಡನಾಟಕ್ಕೆ ಸ್ಪಂದನ ಬೇಕು.
ಆಟಕ್ಕೆ ಜೊತೆ ಇದ್ದರೆ ಮಗುವಿಗೆ ಅಪ್ಪನೂ ಬೇಡ, ಅಮ್ಮನೂ ಬೇಡ.
ಆಟ ಮಗುವಿಗೆ ಆನಂದ ದಾಯಕವಾದದ್ದು. ಆಟದಿಂದ ಮಗುವಿನ ಮನಸ್ಸು ಉಲ್ಲಸಿತವಾಗುತ್ತದೆ.
ಕಲ್ಪನೆಗಳು ಗರಿಗೆದರತೊಡಗುತ್ತವೆ. ಪ್ರತಿಕ್ಷಣ ಹೊಸ ವಿಷಯಗಳ ಬಗ್ಗೆ ಕುತೂಹಲ,ಬೆರಗು ಮೂಡುತ್ತದೆ.
ಆಟದ ಮೂಲಕವೇ ಮಗುವಿನ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಬೆಳೆಯುತ್ತಾ ಹೋಗುತ್ತದೆ.
ರಂಗಭ್ಹೂಮಿಯ ಮೂಲಕ ಶಿಕ್ಷಣ ಎನ್ನುವ ಪರಿಕಲ್ಪನೆ ಹುಟ್ಟಿಕೊಂಡದ್ದೇ ಮಕ್ಕಳ ಚಿಂತನೆಯನ್ನು ಸೃಷ್ಟಿಶೀಲವಾಗಿಸುವುದಕ್ಕೆ.
ಆದರೆ, ಈ ಪರಿಕಲ್ಪನೆಯನ್ನು - ಮಕ್ಕಳಿಗೆ ನಾಟಕದ ಶಾಸ್ತ್ರ,ಸಿದ್ದಾಂತಗಳನ್ನು ಕಲಿಸುವುದು......
ಎಂದು ತಿಳಿದವರೂ ಇದ್ದಾರೆ. ಮಕ್ಕಳಿಗೆ ನಾಟಕ ಯಾಕೆ..? ಎಂದು ಕೇಳುವವರೂ ಇದ್ದಾರೆ.
ಮಕ್ಕಳು ಸಂಭಾಷಣೆಯನ್ನು ಕಂಠಪಾಟ ಮಾಡಿ, ಸ್ವಲ್ಪವೂ ತಪ್ಪಿಲ್ಲದೇ ಒಪ್ಪಿಸುವುದೇ..... ಮಕ್ಕಳನಾಟಕ
ಎಂದು ತಪ್ಪಾಗಿ ಅರ್ಥೈಸಿಕೊಂಡದ್ದೇ ಇದಕ್ಕೆ ಕಾರಣ ಅಷ್ಟೆ.
ಆದರೆ ಅದು ಹಾಗಲ್ಲ,
ಮಕ್ಕಳ ನಾಟಕ ಅಥವಾ ಮಕ್ಕಳ ರಂಗಭೂಮಿ ಚಟುವಟಿಕೆ ಅಂದರೆ ಅದೂ ಒಂದು ಆಟವೇ..
ಅಲ್ಲಿ ಆಟ ಇದೆ, ಓಟ ಇದೆ, ನಾಟಕ ಇದೆ, ಹಾಡು-ಕುಣಿತಗಳಿವೆ, ಚಿತ್ರ ಇದೆ........ ಏನೆಲ್ಲ ಇರುತ್ತವೆ.
ಇದೊಂದು ಹೊಸಾ ಪರಿಕಲ್ಪನೆ ಎಂದು ಭಾವಿಸಬೇಕಾಗಿಲ್ಲ,
ಹಿಂದಿನಿಂದಲೂ, ಮಕ್ಕಳಿಗೆ ಇಷ್ಟವಾದ ಒಬ್ಬ ಒಳ್ಳೆಯ ಅದ್ಯಾಪಕನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಚಿಂತನೆ ಇತ್ತು.
ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದಾಗ ಏಕಾಗ್ರತೆ ಅದಾಗಿ ಉಂಟಾಗುತ್ತದೆ, ಪ್ರಯತ್ನವೇ ಬೇಡ.
ನಮಗೆ ಇಷ್ಟವಾದದ್ದು ಮರೆತೂ ಹೋಗುವುದಿಲ್ಲ.
ಶಾಲಾ ಪೂರ್ವ ದಿನಗಳಲ್ಲಿ ಮಕ್ಕಳ ಆಟವನ್ನು, ಆ ಆಟದೊಳಗಿನ ನಾಟಕವನ್ನು
ನೋಡದವರು, ನೋಡಿ ಮೆಚ್ಚದವರು ಯಾರೂ ಇಲ್ಲ.
ಶಾಲಾ ಸಂದರ್ಭದಲ್ಲೂ ಮಕ್ಕಳ ಈ ಚಟುವಟಿಕೆಯನ್ನು ಬದಿಗೊತ್ತದೇ, ಅದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಾ,
ಮಕ್ಕಳು ಕಲಿಯಬೇಕಾದ ವಾತಾವರಣವನ್ನು ಸೃಷ್ಟಿಸಬೇಕಾದದ್ದು ಶಿಕ್ಷಕರ ಹಾಗೂ ಹೆತ್ತವರ ಹೊಣೆ.
ಮಕ್ಕಳಿಗೆ ಸಾದ್ಯವಾದಷ್ಟೂ ಚಿತ್ರ ಬರೆಯಲು, ನಾಟಕ ಆಡಲು ಪ್ರೊತ್ಸಾಹಿಸಬೇಕು.
ಮಕ್ಕಳಿಗೆ ಕತೆಗಳನ್ನು ಅವರ ಅನುಭವಗಳಿಗೆ ಹೊಂದಿಕೆಯಾಗುವಂತೆ ಹೇಳಿ,
ಆ ಕತೆಗಳನ್ನು ನಾಟಕವಾಡಲು ಹುರಿದುಂಬಿಸಬೇಕು.
ಮಾತುಗಳನ್ನು ಮಕ್ಕಳೇ ಹೊಂದಿಸಿಕೊಳ್ಳುತ್ತಾರೆ. ಮಾತುಗಳು ಹಿರಿಯರ ದೃಷ್ಟಿಯಿಂದ ಸರಿ ಇಲ್ಲ ಎನಿಸಿದರೂ,
ತಿದ್ದಲು ಹೋಗದೇ, ಅವರವರೊಳಗೆ ಸರಿ ತಪ್ಪುಗಳ ಚರ್ಚೆ ನಡೆಯುವಂತೆ ಮಾಡಿ,
ನಿಧಾನವಾಗಿ ಅದು ಅವರ ಅರಿವಿಗೆ ಬರುವಂತೆ ಮಾಡುವುದು ಅಪೇಕ್ಷಣೀಯ.
ಈ ಪ್ರಕ್ರಿಯೆಯೇ ಮಕ್ಕಳಿಗೆ ಸಿಗುವ ಅದ್ಭುತ ಶಿಕ್ಷಣ.
ಈ ಪ್ರಕ್ರಿಯೆಯೇ ನಿರಂತರ, ಪ್ರದರ್ಶನ ಮುಖ್ಯವಲ್ಲ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಬೇಕು.
ಚಿಕ್ಕಮಕ್ಕಳಿಗೆ ಪ್ರದರ್ಶನದ ಚಿಂತೆಯೇ ಇರುವುದಿಲ್ಲ. ಅವರಿಗೆ ಈ ಪ್ರಕ್ರಿಯೆಯೇ ಪ್ರದರ್ಶನ.
ದೊಡ್ಡವರಾದಂತೆ ಪ್ರದರ್ಶನದ ಹುಚ್ಚು ಬೆಳೆಯುತ್ತಾ ಹೋಗುವುದು.
ಮಕ್ಕಳು ಇನ್ನೊಂದು ರೀತಿಯಲ್ಲಿ ಯೋಚಿಸುವಂತೆ ಮಾಡುವುದೇ ಶಿಕ್ಷಣದ ಗುರಿ.
ಇದನ್ನು ನಾಟಕವೇ ಮಕ್ಕಳಿಗೆ ಕಲಿಸುತ್ತದೆ.
ಈ ರೀತಿಯಲ್ಲಿ ನಾಟಕ, ಮಕ್ಕಳಿಗೆ ಆಟವಾಗುವುದರಿಂದ, ಅದು ಅವರಿಗೆ ಆಸಕ್ತಿ ದಾಯಕವಾಗಿ,
ಏಕಾಗ್ರತೆ ತನ್ನಿಂದ ತಾನೇ ಉಂಟಾಗುತ್ತದೆ. ಈ ಏಕಾಗ್ರತೆ ಅವರ ವ್ಯಕ್ತಿತ್ವದ ಭಾಗವಾಗಿ ಬಿಡುತ್ತದೆ.
ನೆನಪಿನ ಶಕ್ತಿ ಹೆಚ್ಚುತ್ತಾ ಬರುತ್ತದೆ, ಗಮನಿಸುವ ಶಕ್ತಿ ಚುರುಕಾಗುತ್ತದೆ, ಕಲ್ಪನಾ ಸಾಮರ್ಥ್ಯ ಬೆಳೆಯುತ್ತದೆ.
ಮಕ್ಕಳ ಸೃಷ್ಟಿಶೀಲತೆ ನಾನಾ ರೂಪದಲ್ಲಿ ಪ್ರಕಟವಾಗುತ್ತದೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತಾ ಬರುತ್ತದೆ.
ಮಕ್ಕಳು ಚಿಂತಿಸಲು ತೊಡಗುತ್ತಾರೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಕಲಿಯುತ್ತಾರೆ.
ಸೋಲು - ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಸಿದ್ದರಾಗುತ್ತಾರೆ.
ಶಿಕ್ಷಣ ಮಾಡಬೇಕಾದ ಕೆಲಸ ಇದೇ ಅಲ್ಲವೇ.......!!
(ಮೂರ್ತಿದೇರಾಜೆ, ಸಮಸಾಂಪ್ರತಿ ವಿಟ್ಲ ದ.ಕ. ಫೊನ್-9448239519, email-moorthyderaje@gmail.com)
ಮಕ್ಕಳ ರಂಗಭೂಮಿಯ ಕುರಿತು ...............
__________________ ವಿಟ್ಲದಿಂದ ಮೂರ್ತಿ ದೇರಾಜೆ
.
ನಾನು ರಂಗಭೂಮಿಯ ತಜ್ಞಅಲ್ಲ. ಲೇಖಕನೂ ಅಲ್ಲ,ವಿಮರ್ಶಕನೂ ಅಲ್ಲ.ಆದರೂ, ಒಂದಷ್ಟು ಮಕ್ಕಳ ನಾಟಕ ಆಡಿಸಿದ್ದಕ್ಕಾಗಿ ಏನಾದರೂ ಬರೆಯಲೇ ಬೇಕಾದ ಅನಿವಾರ್ಯತೆ ಇದೆ.
ನನ್ನಲ್ಲಿ ಕೆಲವು ಜನ ಆಗಾಗ ಕೇಳುತ್ತಿರುವ ಮತ್ತು ನನ್ನಲ್ಲೇ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳಿವೆ.
ಕಳೆದ ಕೆಲವು ವರ್ಷಗಳ, ಮಕ್ಕಳೊಂದಿಗಿನ ನನ್ನ ಒಡನಾಟದಲ್ಲಿ,
ನಾನು ಕಂಡುಕೊಂಡದ್ದನ್ನು, ಇಂದಿಗೆ ಹೀಗೆ..... ಎಂದು ಹೇಳುವ ಪ್ರಯತ್ನ ಇದು..............
(೦೧) ನಾಟಕ ಎಂದರೆ ಏನು?
*ಹೌದು ಏನು....! ಏನು ಅಂತ ಹೇಳುವುದು......!
ನಾಟಕ ಎಂದರೆ ಒಂದು ಕಲೆ, ನಾಟಕ ಎಂದರೆಒಂದು ಭಾಷೆ, ನಾಟಕ ಎಂದರೆ ಶಿಕ್ಷಣ, ನಾಟಕ ಎಂದರೆ ವ್ಯಕ್ತಿತ್ವ ವಿಕಸನ,
ನಾಟಕ ಎಂದರೆ ಬದುಕು, ನಾಟಕ ಎಂದರೆ ಆದ್ಯಾತ್ಮ.....
-ಹೀಗೆ ಏನು ಹೇಳಿದರೂ, ಪೂರ್ತಿ ಹೇಳಿದ ಹಾಗೆ ಆಗುವುದಿಲ್ಲವೋ ಏನೋ...!
(೦೨) ಮಕ್ಕಳ ನಾಟಕ, ಹಿರಿಯರ ನಾಟಕಕ್ಕಿಂತ ಭಿನ್ನವೇ..?
* ಭಿನ್ನ ಹೌದು;
ಮಕ್ಕಳು ಏನು ಮಾಡಿದರೂ ಚೆಂದ, ಅವರು ಅವರಷ್ಟಕ್ಕೇ ನಾಟಕ ಮಾಡಿಕೊಂಡಿರಲಿ"-ಎನ್ನುವ ಕಾರಣಕ್ಕಾಗಿ ಅಲ್ಲ.
ಈ ಮಾತು ಹೆಚ್ಚಿನಸಂದರ್ಭಗಳಲ್ಲಿ ತೀರಾ ಅಪಕ್ವವಾದದ್ದು. ಮಕ್ಕಳ ನಾಟಕ- ಹಗುರವಾದ, ತೇಲಿಬಿಡುವ ವಿಷಯ ಅಲ್ಲ.
ಮಕ್ಕಳ ನಾಟಕ- ‘ಪ್ರಕ್ರಿಯೆ’ಹಾಗೂ ‘ಪ್ರದರ್ಶನ’-ಎರಡರಲ್ಲೂ ಹಿರಿಯರ ನಾಟಕದ ನಕಲು ಅಲ್ಲ.
ಮಕ್ಕಳ ನಾಟಕದ-ಮಾತುಗಳು, ಚಲನೆ, ದೃಶ್ಯ ಯಾವುದೂ ‘ರೆಡಿಮೇಡ್’ ಆಗಿರಬಾರದು.
ಅದು ‘ರಂಗನಾಟಕ’. ರಂಗದಲ್ಲೇ ಹುಟ್ಟಬೇಕು, ರಂಗದಲ್ಲೇ ಬೆಳೆಯಬೇಕು.
ರಸಭಾವವನ್ನು ಉಂಟುಮಾಡಬೇಕಾದದ್ದು ಅಪೇಕ್ಷಣೀಯ.
ಕುತೂಹಲ, ಬೆರಗು, ಮುಗ್ದತೆ, ತುಂಟತನ, ಸಂಭ್ರಮಗಳೇ ಮಕ್ಕಳ ನಾಟಕದ ಜೀವಾಳ.
(೦೩) ಮಕ್ಕಳಿಗೆ ನಾಟಕ ಯಾಕೆ ?
* ನಾಟಕವನ್ನು ಒಂದು ‘ಪ್ರದರ್ಶನ’ವಾಗಿ ಮಾತ್ರ ನೋಡಿದಾಗ ಇಂತಹ ಪ್ರಶ್ನೆ ಹುಟ್ಟಬಹುದೋ ಏನೋ !
ಆದರೆ ಅದು ಹಾಗಲ್ಲ. ಇಲ್ಲಿ ‘ಪಲಿತಾಂಶ’ಕ್ಕಿಂತ ‘ಪ್ರಕ್ರಿಯೆ’ ಮುಖ್ಯವಾಗುತ್ತದೆ.
ಅಂದರೆ , ನಾಟಕ ’ಪ್ರದರ್ಶನ’ಕ್ಕಿಂತ, ನಾಟಕದ ’ತಯಾರಿ ಹೇಗೆ ನಡೆಯಿತು’ ಎನ್ನುವುದು ಮುಖ್ಯ.
"ಪ್ರಕ್ರಿಯೆ ಸುಂದರವಾಗಿದ್ದರೆ, ಪಲಿತಾಂಶವೂ ಸುಂದರವಾಗಿರುತ್ತದೆ ಎನ್ನುವುದು ಸರಳವಾದ ಸತ್ಯ.
ನಾಟಕವು , ಮಕ್ಕಳ ಸೃಷ್ಟಿಶೀಲ ಚಟುವಟಿಕೆಗಳಿಗೆ-
ಪ್ರೇರಣೆ ನೀಡುವ,ಅವಕಾಶ ನೀಡುವ, ಪ್ರೋತ್ಸಾಹಿಸುವ, ಬೆಳೆಸುವ, ಕ್ಷೇತ್ರ; ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ಷೇತ್ರ - ಎನ್ನಬಹುದು.
(೦೪) ಶಾಸ್ತ್ರೀಯವಾದ ನೃತ್ಯ, ಸಂಗೀತ, ಯಕ್ಷಗಾನಗಳ ತರಬೇತಿಗಳು; ಮಕ್ಕಳ ಬೆಳವಣಿಗೆಗೆ ಸಹಕಾರಿಯಲ್ಲವೆ ?
* ಇಂತಹ ತರಬೇತಿ ಬೇಡವೆಂದಲ್ಲ, ಆದರೆ, ಅವೆಲ್ಲಾ ಮಕ್ಕಳ ಅಭಿವ್ಯಕ್ತಿ ಮಾದ್ಯಮ ಎಂದು ನನಗನಿಸುವುದಿಲ್ಲ.
ಮಕ್ಕಳಿಗೇ ಆಸಕ್ತಿ ಇದ್ದಲ್ಲಿ; ಹತ್ತು, ಹನ್ನೆರಡನೇ ವಯಸ್ಸಿನ ನಂತರ ಸಾಕೋ ಏನೋ !
ಹಿರಿಯರು ತಮ್ಮ ಪ್ರತಿಷ್ಠೆ, ಚಪಲಕ್ಕಾಗಿ ಆಸಕ್ತಿಯನ್ನು ಮಕ್ಕಳ ಮೇಲೆ ಹೇರುವುದು ಎಷ್ಟು ಸರಿ !!
ಆ ವಿಷಯಗಳನ್ನೂ, ಪರೀಕ್ಷೆ ಗುರಿಯಾಗಿಸಿಕೊಂಡು ಕಲಿಸುವುದು ಸರಿಯಾದೀತೇ !!
ಕಲಿಯುತ್ತಿರುವಾಗಲೇ ಪ್ರದರ್ಶನ ಸರಿಯಲ್ಲ.
ಶಾಸ್ತ್ರೀಯ ಕಲೆಯ ಪ್ರದರ್ಶನಕ್ಕೆ ಅನೇಕ ವರ್ಷಗಳ ಅದ್ಯಯನ-ತಯಾರಿ ಬೇಕಾಗುತ್ತದೆ.
ಪ್ರದರ್ಶನಕ್ಕೆ ಅವಸರ ಮಾಡಿದಲ್ಲಿ, ಪ್ರದರ್ಶನ ಚಪಲ, ಹೊಗಳಿಕೆಯ ಬಯಕೆ ಹೆಚ್ಚುತ್ತಾ ಹೋಗಿ,
ಕಲಿಕೆ, ಬೆಳವಣಿಗೆ ನಿಂತು ಬಿಡುತ್ತದೆ.
ಪ್ರದರ್ಶನದೊಂದಿಗೇ ಬೆಳೆಯುವ ಕಲೆ- ನಾಟಕ ಮಾತ್ರ.
ನಾಟಕದಲ್ಲಿಇರುವುದು ಸಮೂಹ ಚಟುವಟಿಕೆ ; ವೈಯುಕ್ತಿಕ ಪ್ರತಿಭೆಯ ವೈಭವೀಕರಣ ಅಲ್ಲ.
ಇಲ್ಲಿ, ನಾನು ಹೇಳುತ್ತಿರುವುದು ರಂಗ ನಾಟಕದ ಕುರಿತು; ಪ್ರದರ್ಶನವೇ ಗುರಿಯಾಗಿರುವ ನಾಟಕದ ಬಗ್ಗೆ ಅಲ್ಲ.
(೦೫) ಕತೆ-ಕವನ ರಚನೆಯಂತಹ ಸಾಹಿತ್ಯ ಚಟುವಟಿಕೆ; ಮಕ್ಕಳ ಸಾಹಿತ್ಯಸಮ್ಮೇಳನ-
ಇವೆಲ್ಲ ಮಕ್ಕಳ ಬೆಳವಣಿಗೆಗೆ ಪೂರಕ ಅಲ್ಲವೇ ?
* ಸಾಮಾನ್ಯವಾಗಿ ಇಲ್ಲೆಲಾ ಹಿರಿಯರ ಚಪಲಗಳೇ ಹೆಚ್ಚಾಗಿ ಕೆಲಸ ಮಾಡುವಂತೆ ಕಂಡು ಬರುತ್ತದೆ.
ಮಕ್ಕಳದ್ದೇ ಕಲ್ಪನೆ,ಮಕ್ಕಳದ್ದೇ ಚಿಂತನೆ,ಮಕ್ಕಳದ್ದೇ ಭಾವನೆ, ಮಕ್ಕಳದ್ದೇ ಭಾಷೆ- ಅಲ್ಲಿದ್ದರೆ ಚಂದವೇ ಹೊರತು,
ಹಿರಿಯರು ಬರೆದುಕೊಟ್ಟದ್ದನ್ನು ಉರುಹೊಡೆದು,
ವೇಧಿಕೆಯಲ್ಲಿಭಾಷಣಬಿಗಿಯುವ ಮಕ್ಕಳನ್ನು ಕಂಡು ‘ಧನ’ರಾಗುವುದು -ನನಗೆ ಅರ್ಥವೇ ಆಗುವುದಿಲ್ಲ.
ಕತೆ,ಕವನ ರಚನೆಯು ಮಕ್ಕಳಲ್ಲಿಪ್ರಕಟಣೆಯ,ಪ್ರದರ್ಶನದ, ಹುಚ್ಚನ್ನು ಬೆಳೆಸುವಂತಿರಬಾರದು.
ಎಷ್ಟೋಸಾರಿ, ‘ಇದು ಮಕ್ಕಳ ಕಲ್ಪನೆ’ಎಂದುನಾವು ಬೀಗುವುದು ನಮ್ಮಸಮರ್ಥನೆಗಾಗಿ, ನಮ್ಮಲಾಭಕ್ಕಾಗಿ.
(೦೬) ಹಾಗಾದರೆ, ಮಕ್ಕಳ ಬೆಳವಣಿಗೆಗೆ ನಾಟಕ ಮಾತ್ರ ಸಾಕೇ ? ಬೇರೆ ಯಾವುದೂ ಬೇಕಾಗಿಲ್ಲವೇ ?
* ಮಕ್ಕಳ ಬೆಳವಣಿಗೆಗೆ ನಾಟಕ ಮುಖ್ಯ ಎಂದರೆ, ಉಳಿದ ಯಾವುದೂ ಬೇಡ ಎಂಬ ಅರ್ಥವಲ್ಲ.
ನಾಟಕ ಮನುಷ್ಯನ ಮೂಲಭೂತ ಪ್ರವೃತ್ತಿ, ಹುಟ್ಟಿನೊಂದಿಗೇ ಇದೆ. ನಾಟಕದಲ್ಲಿ ಎಲ್ಲವೂ ಸೇರಿಕೊಂಡಿದೆ
ಪ್ರಾಯಷಃ ,‘ನಾಟಕ’ ಎನ್ನುವುದಕ್ಕಿಂತ ‘ರಂಗಭೂಮಿ’ ಎಂದರೆ ಹೆಚ್ಚು ಸ್ಪಷ್ಟವಾದೀತೋ ಏನೋ !
ರಂಗಭೂಮಿ ಚಟುವಟಿಕೆಯಲ್ಲಿ-ಸಾಹಿತ್ಯ,ಸಂಗೀತ, ನೃತ್ಯ,ಚಿತ,ಆಟ, ಪಾಟ,ಹುಡುಕಾಟ ಎಲ್ಲಾಇರುತ್ತದೆ.
ಶಾಸ್ತ್ರೀಯವಾದದ್ದು, ಅಶಾಸ್ತ್ರೀಯವಾದದ್ದು ಎರಡೂ ಇದೆ.
‘ಎರಡು’ ಅಂದರೆ ‘ದ್ವಂದ’ ಇರುವುದರಿಂದ, ಮನಸ್ಸು ಸೃಷ್ಟಿಶೀಲವಾಗುತ್ತದೆ.
ಶಾಸ್ತ್ರವನ್ನು ಕಲಿತು ಅದನ್ನು ಮೀರುವ ಗುಣ ನಾಟಕದ ಒಡಲಲ್ಲೇ ಇದೆ.
ನಾಟಕ ಅನೇಕ ವಿಷಯಗಳಿಗೆ ಮುಖಾಮುಖಿ ಆಗುವುದರಿಂದ -
ಆಯ್ಕೆಗೆ ಅವಕಾಶ ಹೆಚ್ಚು ಇರುತ್ತದೆ, ಆಸಕ್ತಿಯನ್ನು ವಿಸ್ತರಿಸಿಕೊಳ್ಳಲು ಸಾದ್ಯವಾಗುತ್ತದೆ.
ನಾಟಕವು ಒಂದು ಆಟವಾಗುವುದರಿಂದ ಆನಂದದಾಯಕವಾಗಿರುತ್ತದೆ,’ಕಲಿಕೆ’ಅವರ ಅರಿವಿಗೆ ಬಾರದಂತೆ ನಡೆದಿರುತ್ತದೆ.
ಇಲ್ಲಿ ಕಲಿಸುವುದು ಅಲ್ಲ, ಕಲಿಯುವಂತೆ ಮಾಡುವುದು. ಕಲಿಕೆಯ ಪರಿಸರ-ಸಾಮಾಗ್ರಿ ಒದಗಿಸುವುದು.
ಇನ್ನೂ ಸರಳವಾಗಿ ಹೇಳುವುದಿದ್ದರೆ-
ರಂಗಭೂಮಿ ಚಟುವಟಿಕೆಯಲ್ಲಿ ಮಕ್ಕಳನ್ನು ‘ನಟ’ರನ್ನಾಗಿ ಮಾಡುವುದೇ ಉದ್ದೇಶ ಅಲ್ಲ.
ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿ, ಮಕ್ಕಳು ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವಂತೆ ರೂಪಿಸುವುದು.
‘ರಂಗತರಬೇತಿ’ ಎನ್ನುವುದು ಎಲ್ಲದಕ್ಕೂ ಅಡಿಪಾಯ ಇದ್ದಂತೆ.
ಮಕ್ಕಳು ನಿಧಾನವಾಗಿ ತಮ್ಮದಾರಿಯನ್ನು ಕಂಡುಕೊಳ್ಳುತ್ತಾರೆ. ಬಂದದ್ದನ್ನು ಎದುರಿಸುವ ಛಲ ಬೆಳೆಯುತ್ತದೆ.
ತಮ್ಮ ಆಸಕ್ತಿಯ ದಾರಿಯಲ್ಲಿ, ಸಹಜವಾಗಿ ಏಕಾಗ್ರತೆ ಮೂಡಿ, ಯಾವುದೇ ಸಾಧನೆಗೆ ನೆರವಾಗುತ್ತದೆ.
’ಶಿಕ್ಷಣ ರಂಗಭೂಮಿಯ ಮೂಲಕ ಆಗಬೇಕು’ ಎನ್ನುವುದು ಈ ಕಾರಣಕ್ಕಾಗಿ ಎಂದು ಭಾವಿಸಿದ್ದೇನೆ.
(೦೭) ‘ಶಿಕ್ಷಣ- ರಂಗಭೂಮಿಯ ಮೂಲಕ ನಡೆಯಬೇಕು’-ಎಂದಾದಲ್ಲಿ
ಮಕ್ಕಳಿಗೂ, ಶಿಕ್ಷಕರಿಗೂ ಅನಾವಶ್ಯಕ ಹೊರೆ ಅಲ್ಲವೆ ?
* ಆಲಸೀ ಶಿಕ್ಷಕರಿಗೆ ಹೊರೆ ಎಂದು ಅನಿಸಲೂ ಬಹುದು.
ಮಕ್ಕಳಿಗೆ ಖಂಡಿತಾ ಹೊರೆಯಲ್ಲ. ಭಾರ ಇಳಿದು ಹಗುರವಾಗುತ್ತಾರೆ. ಒತ್ತಡಗಳು ಇರುವುದಿಲ್ಲ.
‘ಹೊರೆ’ ಎಂದು ಅನಿಸುವುದೇ, ಇದು ನೀನು ಕಲಿಯಬೇಕಾದ್ದು ಎಂದು ಗೊತ್ತುಮಾಡಿದಾಗ.
ಕಲಿಕೆ ಗೊತ್ತಿಲ್ಲದೇ ನಡೆದರೆ ಅದು ಆನಂದ. ಆನಂದದಾಯಕವಾದ್ದರಿಂದ ಕಲಿತದ್ದು ನೆನಪಲ್ಲಿ ಉಳಿಯುತ್ತದೆ.
ಮಕ್ಕಳ ಜೊತೆ ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಕ್ಷಕನೂ ಬೆಳೆಯುತ್ತಾನೆ.
‘ತಾನು ಬೆಳೆದಾಗಿದೆ’ ಎಂದು ತಿಳಿದಿರುವವನನ್ನು ಏನು ಮಾಡಲೂ ಸಾದ್ಯವಿಲ್ಲ.
ಅಲ್ಲದೇ ಇದೇನೂ ಹೊಸಾ ವಿಷಯ ಅಲವಲ್ಲಾ! ಒಬ್ಬ ಒಳ್ಳೆಯ ಶಿಕ್ಷಕನ ಪಾಠಕ್ರಮದಲ್ಲಿ,
ಒಂದಲ್ಲ ಒಂದು ರೀತಿಯಲ್ಲಿ ರಂಗಭೂಮಿ ಚಟುವಟಿಕೆ ಸೇರಿಕೊಂಡೇ ಇರುತ್ತದೆ.
(೦೮) ಮಕ್ಕಳ ನಾಟಕವನ್ನು- ‘ಶಿಕ್ಷಣ’ ಎಂದು ಮಾತ್ರ ತಿಳಿಯ ಬೇಕೇ ? ಅಥವಾ ಒಂದು ಕಲೆಯಾಗಿ ನೋಡಬಹುದೇ ?
* ಮಕ್ಕಳನಾಟಕದಲ್ಲಿ ’ಪ್ರಕ್ರಿಯೆ’ ಒಂದು ಶಿಕ್ಷಣವಾಗಬೇಕು; ’ಪ್ರದರ್ಶನ’ ಒಂದು ಕಲೆಯಾಗಬೇಕು.
ಪ್ರದರ್ಶನವಿದ್ದಲ್ಲಿ, ಪ್ರಕ್ರಿಯೆಯನ್ನು ಅದಕ್ಕಾಗಿ ಹೊಂದಿಸಿಕೊಳ್ಳಬೇಕು. ಮಕ್ಕಳ ಮಾತು,ಚಲನೆ ಎಲ್ಲಾಸಹಜವಾಗಿರುವಂತೆ,
ಅವರನ್ನು ಪ್ರೇರೇಪಿಸಿ ಅಭ್ಯಾಸ ನಡೆಸಿದರೆ, ‘ರಸ’ ಸೃಷ್ಟಿಯಾಗಿ, ಪ್ರದರ್ಶನವು ಕಲೆಯ ರೂಪ ಪಡೆಯಲು ಸಾದ್ಯ.
ಅಲ್ಲಿಯೂ ಕಲಿಕೆ ಇದೆ. ರಸಗ್ರಹಣಶಕಿ ಬೆಳೆಯುತ್ತದೆ.
ಸೌಂದರ್ಯ ಪ್ರಜ್ಞೆ, ನಡಿಗೆಯ ಲಯ,ಮಾತಿನ ಏರಿಳಿತ,ಪಾತ್ರದ ಸ್ವಭಾವ -ಇತ್ಯಾದಿ ತಿಳಿಯುತ್ತಾ ಬರುತ್ತದೆ.
ಮಕ್ಕಳ ನಾಟಕವನ್ನು ‘ಕಲಾಪ್ರಕಾರ’ದಿಂದ ಹೊರಗಿಡುವುದು ಸರಿಯಲ್ಲ.
(೦೯) ಮಕ್ಕಳ ನಾಟಕ ಪ್ರದರ್ಶನ ಹೇಗಿರಬೇಕು ?
* ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ; ಅವರು ಬೆಳೆದ ಊರು,ಪರಿಸರಕ್ಕೆ ಅನುಗುಣವಾಗಿ ಇರಬೇಕಾಗುತ್ತದೆ.
ಸಂಭಾಷಣೆಯ ಭಾಷೆ- ಅವರು ದಿನ ನಿತ್ಯ ಬಳಸುವ ಶೈಲಿಯೇ ಚಂದ; ಕಾವ್ಯಮಯವಾಗಿಸುವ ಚಪಲ ಸರಿಯಲ್ಲ.
ಮೇಲ್ನೋಟಕ್ಕಂತೂ ಸರಳವಾಗಿಯೇ ಇರಬೇಕು,
ಹಿರಿಯರ ಯೋಚನೆಯನ್ನು ಕೆದಕುವ ‘ದ್ವನಿ’ಅದರಲ್ಲಿದ್ದರೆ ಅದು ‘ಪ್ಲಸ್ ಪಾಯಿಂಟ್.’
ನಾಟಕದಲ್ಲಿ ಹಾಡು,ಕುಣಿತಕ್ಕೆ ಅವಕಾಶ ಇರಬೇಕು, ವರ್ಣಮಯವಾಗಿರಬೇಕು.
ಹೆಚ್ಚು ಮಕ್ಕಳು ಭಾಗವಹಿಸುವಂತಿದ್ದರೆ ಒಳ್ಳೆಯದು.
ಮಕ್ಕಳ ಕುತೂಹಲ, ಬೆರಗು,ಮುಗ್ಧತೆ,ತುಂಟತನ-ಇವೆಲ್ಲಾ ಸಹಜವಾಗಿ ಪ್ರಕಟವಾಗಿ ರಸ ಸೃಷ್ಟಿಯಾಗಬೇಕು.
ಮುಖವಾಡ, ಮೇಕಪ್ಪು, ವೇಷಭೂಷಣಗಳು ಮಕ್ಕಳಿಗೆ ಹೊರೆ ಆಗಬಾರದು; ಮಕ್ಕಳ ಮುಖ ಸರಿಯಾಗಿ ಕಾಣಿಸುವಂತಿರಬೇಕು.
ಸಾಂಪ್ರದಾಯಿಕ ವೇಧಿಕೆಯ ಜೊತೆ; ಮರಗಿಡಗಳ ನಡುವೆ, ಏರು ತಗ್ಗುಗಳ ನಡುವೆ
ಮಕ್ಕಳು ನಾಟಕವಾಡುವ ಖುಶಿಯೇ ಬೇರೆ.
ಮಕ್ಕಳ ನಾಟಕ ಹಬ್ಬ ಆಗಬೇಕು, ಸಂಭ್ರಮ ಆಗಬೇಕು ಎನ್ನುವುದು ನನ್ನ ಅನಿಸಿಕೆ.
(೧೦) ಮಕ್ಕಳ ನಾಟಕದಲ್ಲಿ; ನೀತಿ, ಸಂದೇಶ ಬೇಕೇ...... ಬೇಡವೇ ?
* ಎಲ್ಲಾ ನಾಟಕಗಳಲ್ಲೂ, ಏನಾದರೂ ಒಂದು ಸಂದೇಶ ಇದ್ದೇ ಇರುತ್ತದಲ್ಲ!’
ನೀತಿ,ಸಂದೇಶ ಹೇಳಿಸುವುದೇ’ಮಕ್ಕಳನಾಟಕದ ಗುರಿಯಲ್ಲ.
ಎಷ್ಟೋಕಡೆ-ನಾಟಕ ಚೆನ್ನಾಗಿ ಸಂವಹನ ಸಾದಿಸಿದ್ದರೂ,
ಕೊನೆಯಲ್ಲಿ ನೀತಿ ಏನೆಂದು ಹೇಳಿಲ್ಲ ಎನ್ನುವ ಕಾರಣ ಮುಂದಿಟ್ಟು ಅಂಕ ಕಳೆಯುವ ತೀರ್ಪುಗಾರರೂ ಇರುತ್ತಾರೆ.
(೧೧) ಮಕ್ಕಳಿಗೆ ಅಭಿನಯ ಕಲಿಸಿ ಕೊಡಬೇಕೇ... ಬೇಡವೇ ?
* ಸಾಮಾನ್ಯವಾಗಿ ಎಲ್ಲಾಕಡೆ, ಒಂದು ಪ್ರದರ್ಶನವನ್ನು ಗಮನದಲ್ಲಿಇಟ್ಟುಕೊಂಡೇ ನಾಟಕ ತಯಾರಿ ನಡೆಯೋದು.
ಅಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅಭಿನಯವನ್ನು ಕಲಿಸಿಕೊಡಬೇಕಾಗುತ್ತದೆ.
ಮಕ್ಕಳು ಎಲ್ಲವನ್ನೂ ಅನುಕರಣೆ ಮಾಡ್ತಾರೆ, ತಮ್ಮದನ್ನೂ ಅಭಿನಯಿಸುತ್ತಾರೆ, ತಮ್ಮದಲ್ಲದ್ದನ್ನೂ ಅಭಿನಯಿಸುತ್ತಾರೆ.
ಯಾಕೆಂದರೆ, ಇವತ್ತು ಮಕ್ಕಳಿಗೆ ಮಾದರಿಗಳಿರುವುದು-ಕೆಟ್ಟದಾದ ಸಿನೀಮಾಗಳು, ಸಿನಿಮಾ ಮಾದರಿಯ ನಾಟಕಗಳು,
ಅಭಿನಯದ ಹೆಸರಿನಲ್ಲಿ ವಿಕಾರ ಅಂಗಚೇಷ್ಟೆಗಳನ್ನು ಪ್ರದರ್ಶಿಸುವ ಹಿರಿಯರ ನಾಟಕಗಳು,
ಕೆಟ್ಟದಾದ ಟಿ.ವಿ. ಧಾರಾವಾಹಿಗಳು, ಟಿ.ವಿ. ಕರ್ಯಕ್ರಮ ನಿರ್ವಾಹಕರು, ಆರ್ಕೆಸ್ಟ್ರಾ ನಿರ್ವಾಹಕರು -ಇತ್ಯಾದಿ.
‘ಇದೇ ಅಭಿನಯ’ ಎಂದು ತಿಳಿದ ಮಕ್ಕಳಿಗೆ-
ಇದು ನಿಮ್ಮದಲ್ಲಾ, ನಿಮ್ಮ ಅಭಿನಯ ಬೇರೆ..... ಎಂದು ಕಲಿಸಿಕೊಡಬೇಕಾಗುತ್ತದೆ.
ಮಕ್ಕಳನ್ನುಬೇಗ ‘ದೊಡ್ಡವರ’ನ್ನಾಗಿಸುವ ಭರದಲ್ಲಿ, ಮಕ್ಕಳ ಬಾಲ್ಯವನ್ನು ನಾವೇ ಹೊಸಕಿ ಹಾಕುತ್ತಿದೇವೆ.
ಮಕ್ಕಳ ಸಹಜತೆ, ಕೊನೇಪಕ್ಷ ನಾಟಕದಲ್ಲಿ ಆದರೂ ಕಾಣಲಿ,
ಎನ್ನುವ ಕಾರಣಕ್ಕಾಗಿಯಾದರೂ, ಅಭಿನಯವನ್ನು ಕಲಿಸಿಕೊಡುವುದು ಒಳ್ಳೆಯದು.
ಮಕ್ಕಳ ಸಹಜ ಅಭಿನಯವನ್ನು ಹೊರಗೆಳೆಯಬೇಕಾದ್ದು ನಿರ್ದೇಶಕನ ಹೊಣೆ.
ಆದರೆ, ನಾಟಕ ‘ಪ್ರದರ್ಶನ’ ಇಲ್ಲ ಎಂದಾದರೆ, ನಾಟಕ ಎನ್ನುವುದು ದಿನನಿತ್ಯದ ಪ್ರಕ್ರಿಯೆ ಎಂದಾದರೆ,
ಅಭಿನಯವನ್ನು ನೇರವಾಗಿ ಕಲಿಸ ಬೇಕಿಲ್ಲ. ಕೊರತೆಗಳನ್ನು ಎತ್ತಿ ತೋರಿಸದೇ, ‘ಚೆನ್ನಾಗಿದೆ’ ಎಂದು ಬೆನ್ನು ತಟ್ಟುತ್ತಾ,
ಮಕ್ಕಳೇ ಯೋಚಿಸಿ ಕಲಿಯುವಂತೆ ಮಾಡಬೇಕಾದ್ದು ನಿರ್ದೇಶಕನ ಜವಾಬ್ದಾರಿ.
ನಿರ್ದೇಶಕ ಎಲ್ಲವನ್ನೂ ಸೂಕ್ಶ್ಮವಾಗಿ ಗಮನಿಸುತ್ತಾ, ಮಕ್ಕಳು ತನ್ನ ಕೈ ಕೂಸುಗಳಾಗದಂತೆ ಎಚ್ಚರ ವಹಿಸಬೇಕು.
ಮಕ್ಕಳ ಕಲ್ಪನೆಗಳಿಗೆಅವಕಾಶ ನೀಡಿ,ಅವರ ಸಾಮರ್ಥ್ಯವನ್ನು ಬೆಳೆಸ ಬೇಕು. ಶಾಲೆಗಳಲ್ಲಿ ದಿನ ನಿತ್ಯ ನಡೆಯಬೇಕಾದ್ದು ಹೀಗೆ.
‘ಪಲಿತಾಂಶ ಮುಖ್ಯ’ ಎನ್ನುವ ಭ್ರಮೆ ಹೋಗಿ, ‘ಪ್ರಕ್ರಿಯೆ ಮುಖ್ಯ’ ಎನ್ನುವ ಅರಿವು ಎಲ್ಲಾ ಹಿರಿಯರಲ್ಲೂ ಮೂಡಬೇಕು.
(೧೨) ಕನ್ನಡದಲ್ಲಿ ಮಕ್ಕಳ ನಾಟಕ ಪಠ್ಯದ ಕೊರತೆ ಇದೆ ಎನ್ನುತ್ತಾರಲ್ಲ...!!
* ನನಗಂತೂ ಹಾಗನಿಸಿಲ್ಲ..... ಮಕ್ಕಳ ನಾಟಕಕ್ಕೆ ‘ರೆಡಿಮೇಡ್ ಸ್ಕ್ರಿಪ್ಟ್’ ಯಾಕೆ ...?
ಎಷ್ಟೋ ವರ್ಷಗಳಿಂದ ಬರುತ್ತಿರುವ ‘ಚಂದಮಾಮ’ ಇದೆ, ‘ಪಂಚತಂತ್ರ’ ಇದೆ, ಅನೇಕ ಮಕ್ಕಳ ಕತೆ ಪುಸ್ತಕಗಳಿವೆ,
ಇದಲ್ಲದೇ ಮಕ್ಕಳ ಬಾಯಿ ಬಿಡಿಸಿದರೆ ಅದ್ಭುತವೆನಿಸುವ ಕತೆಗಳೂ ಹುಟ್ಟಿಕೊಳ್ಳುತ್ತವೆ.
ಮಕ್ಕಳಿಗೆ ಎಂದೂ ನಾಟಕದ ಕೊರತೆ ಕಂಡುಬರುವುದಿಲ್ಲ.
ಮಕ್ಕಳ ಮೂಲಕ ಸಂಭಾಷಣೆ ಬೆಳೆದಾಗಲೇ, ಅದು ಮಕ್ಕಳ ನಾಟಕ ಆಗೋದು ಎನ್ನುವುದು ನನ್ನ ನಂಬಿಕೆ.
-ಪೌರಾಣಿಕ,ಐತಿಹಾಸಿಕ ನಾಟಕಗಳು,ನೀತಿಯುತವಾದ ನಾಟಕಗಳು ಮಾತ್ರ,- ಮಕ್ಕಳ ನಾಟಕಗಳು.......
-ಮಕ್ಕಳ ನಾಟಕದಲಿ,ಅದ್ಭುತ ರಮ್ಯ ಕಲ್ಪನೆಗಳು ಇರಬಾರದು,ವಾಸ್ತವತೆಯ ಅರಿವು ಮೂಡಿಸುವ ಕೆಲಸ ಅಗಬೇಕು.....
-ಇಂತಹ ಭ್ರಮೆಗಳನ್ನು ಬಿಟ್ಟು, ಮಕ್ಕಳಾಗಿಯೇ ಯೋಚಿಸಿದಾಗ,ಮಕ್ಕಳ ನಾಟಕಪಠ್ಯದ ಕೊರತೆ ಕಂಡುಬರಲಾರದು.
(೧೩) ನಾಟಕದ ಸಂಭಾಷಣೆ ಮಕ್ಕಳೇ ರಚಿಸಿಕೊಂಡರೆ ಅದು ಸರಿಯಾದೀತೇ ? ರಸ ಸೃಷ್ಟಿಯಾದೀತೇ ?
* ಮಕ್ಕಳೇ ಅಲ್ಲ, ಮಕ್ಕಳ ಮೂಲಕ ಸಂಭಾಷಣೆ.
ಅಂದರೆ ನಿರ್ದೇಶಕ ಅಥವಾ ನಾಟಕಕಾರ ಅಯಾಯ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ,
ಮಗುವಿನ ಅರಿವಿಗೆ ನಿಲುಕುವಂತಾ ಮಾತುಗಳನ್ನು ಕಟ್ಟುತ್ತಾ ಸಂಭಾಷಣೆ ಬೆಳೆಸುವುದು ಮುಖ್ಯ.
ಆಗ ಈ ಮಾತು,ತನ್ನದೇ ಸ್ವಂತದ್ದು ಎಂದು ಮಗು ನಂಬುವಂತಾಗುತ್ತದೆ,
ಮಗುವಿಗೆ ಪಾತ್ರದೊಳಗೆ ಪ್ರವೇಶ ಸುಲಭವಾಗುತ್ತದೆ. ನಿರ್ದಿಷ್ಟ ಭಾವ ಮನಸ್ಸಿನಲ್ಲಿ ಮೂಡಿ, ಮಾತು ಸಹಜವಾಗುತ್ತದೆ.
(೧೪) ಮಕ್ಕಳ ರಂಗಭೂಮಿ ಎಂದರೆ, ಹಿರಿಯರು ಮಕ್ಕಳಿಗಾಗಿ ಅಭಿನಯಿಸುವಂತಾದ್ದು; ಮಕ್ಕಳೇ ಅಭಿನಯಿಸುವುದು ಅಲ್ಲ,
ಮಕ್ಕಳೇ ಅಭಿನಯಿಸಿದರೆ ಅದು ’ಸೃಜನಾತ್ಮಕ ರಂಗಭೂಮಿ’ಎನ್ನುವ ವಾದ ಇದೆಯಲ್ಲ!
* ವಾದ ಇಲ್ಲದೇ ಇರುವುದು ಯಾವುದಕ್ಕೆ ! ವಾದದ ಜೊತೆಗೇ ಪ್ರತಿವಾದವೂ ಹುಟ್ಟಿಕೊಳ್ಳುತ್ತದಲ್ಲ.
ಇರಲಿ ಬಿಡಿ....! ಸೃಜನಾತ್ಮಕ ರಂಗಭೂಮಿ ಅಂದರೆ ತಪ್ಪಲ್ಲ.ನಿಜವಾಗಿ ಸೃಜನಶೀಲತೆ ಮಕ್ಕಳಲ್ಲೇ ಹೆಚ್ಚಲ್ಲವೇ !
ದೊಡ್ಡವರಾದಂತೆ ನಮ್ಮ ’ಖಚಿತ ನಂಬಿಕೆ’ಯೇ ನಮ್ಮ ಸೃಜನಶೀಲತೆಗೆ ಅಡ್ಡಿಯಾಗುತ್ತದಲ್ಲ!
..........ಹೆಸರು ಏನು ಬೇಕಾದರೂ ಕೊಡಲಿ, ಮಕ್ಕಳು ನಾಟಕ ಮಾಡುತ್ತಾ ಇರಲಿ.
(೧೫) ಹಾಗಲ್ಲ..... ಈಗ ಮಕ್ಕಳ ಸಾಹಿತ್ಯ ಎಂದರೆ, ಮಕ್ಕಳಿಗಾಗಿ ಅನೇಕ ಹಿರಿಯರು ಬರೆದ ಸಾಹಿತ್ಯ,
ಮಕ್ಕಳೇ ಬರೆದದ್ದನ್ನು ಮಕ್ಕಳ ಸಾಹಿತ್ಯ ಎನ್ನಲು ಸಾದ್ಯವೇ ?
* ವಾದ ಚೆನ್ನಾಗಿದೆ........ ಆದರೆ ದಯವಿಟ್ಟು ಇನ್ನೊಮ್ಮೆ ಗಮನಿಸಬೇಕು;
ಸಾಹಿತ್ಯವನ್ನೂ, ನಾಟಕವನ್ನೂ ಹೋಲಿಸಿ ಹೇಳುವುದು ಸರಿಯೇ ..... !
ಊಟ ,ನಿದ್ರೆ, ಆಟ ದಂತೆ. ನಾಟಕ ಎನ್ನುವುದೂ ಮಕ್ಕಳ ಮೂಲಭೂತ ಪ್ರವೃತ್ತಿ,
ಆದರೆ ಸಾಹಿತ್ಯ ಹಾಗೆ ಅಲ್ಲವಲ್ಲಾ!..............
ಆದರೆ...... ಹೀಗೆಂದು ನನ್ನ ವಾದ ಏನೂ ಇಲ್ಲ.
ಆ ನಿಲುವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎನ್ನುವುದಷ್ಟೇ ನನ್ನ ಕೇಳಿಕೆ.
(೧೬) ಒಂದು ಮಕ್ಕಳನಾಟಕ ಎಂದರೆ ತುಂಬಾ ಖರ್ಚು ಬರುವುದಿಲ್ಲವೇ ! ಎಲ್ಲರಿಗೂ ಹೇಗೆ ಸಾದ್ಯವಾದೀತು ?
* ಈ ಅಭಿಪ್ರಾಯ ಹುಟ್ಟಿಸಿದ್ದು ನಮ್ಮ ದೊಡ್ಡ ದೊಡ್ಡ ರಂಗಕರ್ಮಿಗಳೇ ಇರಬಹುದೇನೋ !
ಸೆಟ್ಟಿಂಗ್, ಪ್ರಾಪರ್ಟಿ, ಕಾಸ್ಟ್ಯೂಮ್, ಮೇಕಪ್, ಮ್ಯೂಸಿಕ್, ಲೈಟಿಂಗ್ ಅಂತ ವಿಪರೀತ ಖರ್ಚು ಮಾಡಿಸಬೇಕೆಂದೇ ಇಲ್ಲ್ಲ.
ಮಕ್ಕಳಿಂದಲೇ ಬಟ್ಟೆ ಬರೆಗಳನ್ನೂ, ಇನ್ನಿತರ ಸಾಮಾಗ್ರಿಗಳನ್ನೂ ಹೊಂದಿಸಿಕೊಂಡು ಸುಂದರವಾಗಿ ನಾಟಕ ಆಡಿಸಬಹುದು.
ಮಕ್ಕಳ ಸಹಜ ಅಭಿನಯವೇ ಮುಖ್ಯ. ಉಳಿದುದೆಲ್ಲಪೂರಕ ಅಷ್ಟೆ.
’ದೃಶ್ಯವೈಭವ’ಮುಖ್ಯವಾದರೆ ಸ್ವಲ್ಪಮಟ್ಟಿನ ಖರ್ಚು ಅನಿವಾರ್ಯ.
ಮಕ್ಕಳ ನಾಟಕದ ಗಂಭೀರತೆಯ ಅರಿವು ಎಲ್ಲರಲ್ಲೂ ಮೂಡಿದರೆ,ಈ ’ಖರ್ಚು’ ದೊಡ್ಡ ಸಮಸ್ಯೆಯಗಲಾರದು.
(೧೭) ಮಕ್ಕಳ ನಾಟಕ ಸಂಗೀತ ಹೇಗಿರಬೇಕು ?
* ನಾಟಕ ನಿರ್ದೇಶಕನಿಗೆ ಲಯ-ಶೃತಿಗಳ ಅರಿವು ಸ್ವಲ್ಪವಾದರೂ ಇದ್ದಲ್ಲಿ, ಮಕ್ಕಳ ನಡೆ-ನುಡಿಗಳಲ್ಲಿ
ಲಯವನ್ನು ಉಳಿಸಿಕೊಳ್ಳಬಹುದು. ಹಾಗಿದ್ದರೆ ಮಾತ್ರ, ಬೇಕಾದಲ್ಲಿ ಬಾಹ್ಯಸಂಗೀತವನ್ನು ಸೇರಿಸಿಕೊಳ್ಳಲು ಸಾದ್ಯ.
ಇಲ್ಲವಾದರೆ ಸಂಗೀತ ನಾಟಕಕ್ಕಿಂತ ಬೇರೆ ಉಳಿದು ಬಿಡುತ್ತದೆ. ಸಂಗೀತ ಹೀಗೆಯೇ ಇರಬೇಕೆಂದು ಹೇಳುವುದು ಕಷ್ಟ.
ನಾಟಕ ಪ್ರದರ್ಶನಕ್ಕೆ ಸಂಬಂದ ಪಟ್ಟಂತೆ ಸಂಗೀತ ಎಂದರೆ,
ಹಾಡುಗಳು ಮಾತ್ರ ಅಲ್ಲ.ದ್ವನಿಗಳೂ ಸಂಗೀತವೆ.ನಿಶ್ಶಬ್ಧವೂ ಸಂಗೀತವೆ. ವಾದ್ಯಗಳು ಮಾತ್ರವಲ್ಲ, ಅವಾದ್ಯಗಳೂ ಸಂಗೀತವೆ.
ಮಕ್ಕಳನಾಟಕದಲ್ಲಿ- ಸಂಗೀತ,ಅಂದರೆ ಈ ಹಾಡು ಇತ್ಯಾದಿ ಬಾಹ್ಯ ಸಂಗೀತ ಇರಲೇಬೇಕೆಂಬ ಹಠ ಬೇಕಾಗಿಲ್ಲ.
ಇದ್ದರೂ ಶೃತಿ-ಲಯ ಗಳನ್ನು ನಿರ್ಲಕ್ಷಿಸಬಾರದು. ಹಾಗೆಂದು ಶೃತಿ,ರಾಗ,ಲಯ,ತಾಳ ಎನ್ನುತ್ತಾ,
ಶಾಸ್ತ್ರೀಯ ಚೌಕಟ್ಟಿನಿಂದ ಹೊರಬರಲಾರದವರು ಹಾಡುವುದೂ,ಸಂಗೀತ ವಿನ್ಯಾಸ ಮಾಡುವುದು,
ಸ್ವಲ್ಪ ಕಿರಿಕಿರಿ ಮತ್ತು ಅಪಾಯ ಕೂಡಾ.
’ಮಕ್ಕಳನಾಟಕಕ್ಕೆ ಮಕ್ಕಳಿಂದಲೇ ಸಂಗೀತ ಮಾಡಿಸಬೇಕು’ಎನ್ನುವ ಹಠ ಇದ್ದರೆ, ನಾಟಕ ಒಂದು ’ಸಂತೆ’ಯಾಗದಂತೆ,
ಕಲೆಯ ಚೌಕಟ್ಟನ್ನು ಮೀರದಂತೆ ನೋಡಿಕೊಳ್ಳಲೇ ಬೇಕು. ಇಲ್ಲವಾದಲ್ಲಿ ಪ್ರೇಕ್ಷಕರಿಗೆ ದೊಡ್ಡ ಹಿಂಸೆಯೇ ಸರಿ.
’ಪ್ರಕ್ರಿಯೆ’ಯಲ್ಲಿ ಮಕ್ಕಳೇ, ಕೈಗೆ ಸಿಕ್ಕಿದ ಅವಾದ್ಯಗಳಿಂದ ಸಂಗೀತ ನೀಡುವಂತೆ ಪ್ರೇರೇಪಿಸಬಹುದು, ಮತ್ತು ಒಳ್ಳೆಯದು ಕೂಡಾ.
(೧೮) ಮಕ್ಕಳಿಗೆ ರಜೆಯಲ್ಲೂ ಏನಾದರೂ ಕೆಲಸ ಕೊಡಬೇಕು....., ಕಡ್ಡಾಯವಾಗಿ ಬೇಸಿಗೆ ಶಿಬಿರಗಳಿಗೆ ಕಳುಹಿಸಬೇಕು.....,
ಹೆಚ್ಚು ಹೆಚ್ಚು ವಿಷಯಗಳನ್ನು ಕಲಿಸಬೇಕು ಎನ್ನುವುದು ಸರಿಯೇ ?
* ಖಂಡಿತಾ ಸರಿಯಲ್ಲ ಎಂದು ಕಾಣುತ್ತಾ ಇದೆ. ಇವತ್ತು ರಜಾ ಶಿಬಿರಗಳು ’ಒಂದು ದಂದೆ’ ಯಾಗಿದೆ. ಹೆತ್ತವರಿಗೂ ಭ್ರಮೆ.
ಶಿಬಿರದಲ್ಲೂ ಮಕ್ಕಳು ಹೆಚ್ಚು ಖುಷಿಯಲ್ಲಿರುವುದು - ನಿರ್ದೇಶಕನ ಸೂತ್ರವಿಲ್ಲದೇ ಇದ್ದಾಗ. ಅವರಷ್ಟಕ್ಕೇ ಅವರಿದ್ದಾಗ.
ಕಟ್ಟು ಪಾಡಿನ ಶಿಬಿರಗಳಿಗಿಂತ, ರಜದಲ್ಲಿ ಮಕ್ಕಳು ಅವರಿಷ್ಟ ಬಂದಂತೆ ಅಜ್ಜಿ ಮನೆ ಇತ್ಯಾದಿ ತಿರುಗಾಡುವುದು ಒಳ್ಳೆಯದು.
ಪ್ರಕೃತಿಯನ್ನು ನೋಡಿ ಮಕ್ಕಳು ತುಂಬಾ ಕಲಿಯುತ್ತಾರೆ, ಆ ಕಲಿಕೆ ಬಹು ಕಾಲ ಉಳಿದೂ ಉಳಿಯುತ್ತದೆ.
ಪುಕುವೊಕಾ ನ ಸಹಜ ಕೃಷಿಯ ತತ್ವವೇ ಇಲ್ಲೂ ಸರಿ ಎಂದು ಅನಿಸುವುದಿಲ್ಲವೇ !
ಶಾಲೆಗಳಲ್ಲಿ ನಿಜವಾದ ಅರ್ಥದಲ್ಲಿ, ಶಿಕ್ಷಣ ನಡೆದರೆ, ರಜೆಯಲ್ಲಿ ಮಕ್ಕಳನ್ನು ಗೋಳು ಹೊಯ್ದುಕೊಳ್ಳುವುದನ್ನು ತಪ್ಪಿಸ ಬಹುದು.
(೧೯) ಹೆತ್ತವರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎನ್ನುವುದು ನಿಜ ತಾನೇ !
* ನಿಜ ಅಲ್ಲವೆಂದಲ್ಲ ...... ಆದರೆ, ಆ ಸಿದ್ಧಾಂತವೂ ಸ್ವಲ್ಪ ’ಅತಿ’ ಆಯ್ತೇನೋ ಎಂದು ಕಾಣುತ್ತಾ ಇದೆ.
ನಿನ್ನ ಒಂದು ದಿನದ ಸಂಬಳ ನನ್ನ ಪಾಕೆಟ್ ಮನಿಯಿಂದ ಕೊಡುತ್ತೇನೆ, ನಿನ್ನ ಒಂದು ದಿನ ನನಗೆ ಕೊಡುತ್ತಿಯಾ ಅಪ್ಪಾ
ಎಂದು ಮಗು ಕೇಳುವ ಜಾಹೀರಾತು ಚೆನ್ನಾಗಿದೆ ನಿಜ. ಮತ್ತು ಸ್ವಲ್ಪ ಮಟ್ಟಿನ ’ಮೆಲೋಡ್ರಾಮಾ’ಎಂದೂ ಅನಿಸುವುದಿಲ್ಲವೇ ?
ಅಂತಾ ಚಿಂತನೆ ಮಕ್ಕಳದ್ದೇ.. ಎನ್ನಲು ಸಾದ್ಯವೇ ?
ಎಷ್ಟೋ ಸಾರಿ ... ಇದು ಮಕ್ಕಳ ಚಿಂತನೆ,.... ಮಕ್ಕಳ ಯೋಚನೆ ......
ಎಂದು ನಮಗೆ ನಾವೇ ಮೋಸ ಮಾಡಿಕೊಳ್ಳುವುದಲ್ಲವೇ !
ತನ್ನ ವಯಸ್ಸಿನ ಗೆಳೆಯರ ಒಡನಾಟ ಮಗುವಿಗೆ ಸದಾ ಸಿಗುವಂತಾ ವಾತಾವರಣವನ್ನು ಗಮನಿಸಿದರೆ,
ಇದು ಸ್ವಲ್ಪ ಸ್ಪಷ್ಟವಾದೀತು.
ಮಗುವಿಗೆ ಆಟ ಬೇಕು, ಆಟಕ್ಕೆ ಜನ ಸಿಕ್ಕಿದರೆ, ಮಕ್ಕಳಿಗೆ ಅಪ್ಪ ಅಮ್ಮನೂ ಬೇಡ ಏನೂ ಬೇಡ.
ಮತ್ತೆ - ಈ ಸಮಸ್ಯೆ, ಅವಿಭಕ್ತಕುಟುಂಬದ ಮನೆಯಲ್ಲಿ, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಮನೆಗಳಲ್ಲಿ ಇದೆಯೇ ?
(೧೭) ಹೆಚ್ಚು ಸ್ಪರ್ದೆಗಳನ್ನು ಏರ್ಪಡಿಸುವ ಮೂಲಕ, ಮಕ್ಕಳನ್ನು ಚುರುಕಾಗಿಸಿ, ಪ್ರತಿಭೆಗಳನ್ನು ಬೆಳಕಿಗೆ ತರಬಹುದಲ್ಲ...!
* ಸರಿಯಲ್ಲ. ಎಲ್ಲಾ ಅಶಾಂತಿಗೂ ಸ್ಪರ್ದೆಯೇ ಕಾರಣ. ಹಿರಿಯರಲ್ಲಿರುವ ಸ್ಪರ್ದೆಗೆ ಮಕ್ಕಳು ಬಲಿ ಅಷ್ಟೆ.
ಆಟೋಟಗಳಲ್ಲಾದರೆ ಸ್ಪರ್ದೆ ಸರಿ. ಅಲ್ಲಿ ಸೊಲು-ಗೆಲುವು ಎಲ್ಲರಿಗೂ ನಿಚ್ಚಳವಾಗಿ ಕಾಣಿಸುತ್ತದೆ.
ಸೋತ ಮಕ್ಕಳಿಗೆ ‘ತಮ್ಮದೇ ಅಸಾಮರ್ಥ್ಯದಿಂದಾದ ಸೋಲು’ ಎನ್ನುವುದು ಅರಿವಾಗಿ ಛಲ ಬೆಳೆಯುತ್ತದೆ.
ಕಲೆ, ಶಿಕ್ಷಣದಲ್ಲಿ- ತಮ್ಮ ಸೋಲಿಗೆ ಕಾರಣ ತಿಳಿಯದೇ, ಕೀಳರಿಮೆ ಉಂಟಾದೀತೇ ಹೊರತು ಬೆಳವಣಿಗೆ ಸಾದ್ಯವಾಗಲಾರದು.
ಕಲೆ, ಶಿಕ್ಷಣ ಹಾಗೂ ಬದುಕಿನಲ್ಲಿ ಸ್ಪರ್ದೆ ಇರಬೇಕಾದ್ದು ತನ್ನಲ್ಲೇ ತನಗೆ ಹೊರತು ಇನ್ನೊಬ್ಬರಲ್ಲಿ ಅಲ್ಲ.
ಸ್ಪರ್ದೆಯ ಬದಲು ಉತ್ಸವಗಳಾಗಲಿ ಎಂದರೂ ಅಪಾಯ ಇದ್ದೇ ಇದೆ. ಉತ್ಸವದಲ್ಲೂ ಸ್ಪರ್ದೆ.
ಇವತ್ತಿನ ಸಾರ್ವಜನಿಕ ಉತ್ಸವಗಳೇ ಮಕ್ಕಳ ಉತ್ಸವಕ್ಕೂ ಪ್ರೇರಣೆ.
ಆದರೆ, ಸ್ಪರ್ದೆ ಇವತ್ತು ಅನಿವಾರ್ಯವಾಗಿರುವುದರಿಂದ,
ಮಕ್ಕಳಿಗೆ ‘ಸೋಲುವುದನ್ನು ಕಲಿಸುವುದು’ ಒಳ್ಳೆಯದು ಎಂದು ಕಾಣುತ್ತಾ ಇದೆ.
****************
(ಮೂರ್ತಿದೇರಾಜೆ, ಸಮಸಾಂಪ್ರತಿ ವಿಟ್ಲ ದ.ಕ. ಫೊನ್-9448239519, email-moorthyderaje@gmail.com)
No comments:
New comments are not allowed.